ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಕೈಜೋಡಿಸಿ

ds meting
Published on

ಮಡಿಕೇರಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಕೈಜೋಡಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಇತರೆ ಚುನಾವಣೆ ವಿಷಯಗಳ ಕುರಿತು ಅಧ್ಯಕ್ಷತೆ ವಹಿಸಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಹಿನ್ನೆಲೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ಜಿಲ್ಲೆಯಲ್ಲಿಯೂ ಸಹ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ. ೨೦೦೨ರಲ್ಲಿ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗಿತ್ತು, ಆ ದಿಸೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರನ್ನು ನೇಮಿಸಿಕೊಳ್ಳುವಂತಾಗಬೇಕು ಎಂದು ಕೋರಿದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ನಮೂನೆ-೬ರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ನಮೂನೆ-೦೭ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವುದು, ನಮೂನೆ-೦೮ ರಲ್ಲಿ ತಿದ್ದುಪಡಿ, ಸ್ಥಳಾಂತರ, ಎಪಿಕ್ ಕಾರ್ಡ್ ಬದಲಾವಣೆ, ಪಿಡಬ್ಲ್ಯುಡಿ ಮಾರ್ಕಿಂಗ್(ವಿಕಲಚೇತನರನ್ನು ಗುರುತಿಸುವುದು) ಈ ಕೆಲಸವನ್ನು ಬೂತ್ ಮಟ್ಟದ ಏಜೆಂಟರು ಮಾಡಿದ್ದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯ ಸಮರ್ಪಕವಾಗಲಿದೆ ಎಂದರು.

ಬೂತ್ ಮಟ್ಟದಲ್ಲಿ ಮತದಾರರ ವಿವರ, ನಮೂನೆ-೬, ೦೭ ಮತ್ತು ೦೮ ರ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುವಂತಾಗಬೇಕು. ವಿವಿಧ ರಾಜಕೀಯ ಪಕ್ಷಗಳು ತಾವು ನೇಮಕ ಮಾಡುವ ಬೂತ್ ಮಟ್ಟದ ಏಜೆನ್ಸಿಗಳ ಪಟ್ಟಿಯನ್ನು ಜಿಲ್ಲಾ ಚುನಾವಣಾ ಕಚೇರಿಗೆ ಒದಗಿಸುವಂತಾಗಬೇಕು. ಆ ನಿಟ್ಟಿನಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಎಲ್ಲೆಡೆ ಜಾಗೃತಿ ಮೂಡಿಸುವಂತಾಗಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ವಿವಿಧ ಪಕ್ಷದ ಪ್ರಮುಖರಾದ ತೆನ್ನಿರಾ ಮೈನಾ(ಕಾಂಗ್ರೆಸ್), ಸಜ್ಜಿಲ್ ಕೃಷ್ಣ(ಬಿಜೆಪಿ), ಗುಲಾಬಿ ಜನಾರ್ದನ(ಜೆಡಿಎಸ್), ರಮೇಶ್(ಸಿಪಿಐಎಂ), ಸೋಮಪ್ಪ(ಸಿಪಿಐ), ಪೃಥ್ವಿ(ಎಎಪಿ) ಅವರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಬೂತ್ ಮಟ್ಟದ ಏಜೆಂಟರ ನೇಮಕ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net