ಮಹನೀಯರ ಜಯಂತಿ ಕಾರ್ಯಕ್ರಮಕ್ಕೆ ಕೈಜೋಡಿಸಿ

dc sabhe
Published on

ಮಡಿಕೇರಿ: ವಿವಿಧ ಮಹನೀಯರ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ಜತೆ ಕೈಜೋಡಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮನವಿ ಮಾಡಿದರು.


ಜನವರಿ ತಿಂಗಳಲ್ಲಿ ಶಿವಯೋಗಿ ಸಿದ್ದರಾಮೇಶ್ವರ, ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ ಮತ್ತು ಮಡಿವಾಳ ಮಾಚಿದೇವ ಜಯಂತ್ಯುತ್ಸವ ಆಚರಣೆ ಸಂಬಂಧ ಜಿಲ್ಲಾಧಿಕಾರಿ ವೆಂಕಟ್ ರಾಜಾರವರ ಅಧ್ಯಕ್ಷತೆಯಲ್ಲಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.


ಆರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮಾತನಾಡಿ, ಜ.೧೫ ರಂದು ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ನಿಗದಿಯಾಗಿದೆ ಎಂದು ಸಭೆಯ ಗಮನಕ್ಕೆ ತಂದರು.


ಈ ಸಂದರ್ಭದಲ್ಲಿ ಭೋವಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಸುಜೀತ್ ಮಾತನಾಡಿ, ಜ.೧೫ ರಂದು ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ ಜ.೨೨ ರಂದು ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದರು.


ಕಾವೇರಿ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಇ.ಎಸ್.ಶ್ರೀನಿವಾಸ್ ಮಾತನಾಡಿ, ಜ.೨೧ ರಂದು ಅಂಬಿಗರ ಚೌಡಯ್ಯ ಜಯಂತಿ ನಿಗದಿಯಾಗಿದ್ದು, ಜ.೨೧ ರ ಬದಲಾಗಿ, ಜ.೨೨ ರಂದು ಕಾರ್ಯಕ್ರಮ ಆಯೋಜಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಈ ಎರಡು ಕಾರ್ಯಕ್ರಮವನ್ನು ನಗರದ ಗಾಂಧಿ ಭವನದಲ್ಲಿ ಜ.೨೨ ರಂದು ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.


ಮಡಿವಾಳ ಮಾಚಿದೇವ ಜಯಂತಿಯು ಫೆ.೧ ರಂದು ನಿಗಧಿಯಾಗಿದ್ದು, ಫೆ.೧ ರ ಬದಲಾಗಿ ಫೆ.೨೫ ರಂದು ನಗರದ ವೀರಭದ್ರೇಶ್ವ ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜನೆಗೆ ಅವಕಾಶ ಮಾಡುವಂತೆ ಮಡಿವಾಳರ ಅಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ.ಸುಕುಮಾರ್ ಕೋರಿದರು. ಇದಕ್ಕೆ ಜಿಲ್ಲಾಧಿಕಾರಿರವರು ಸಹಮತ ವ್ಯಕ್ತಪಡಿಸಿದರು. ವಿವಿಧ ಮಹನೀಯರ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ಜತೆ ಕೈಜೋಡಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಕೋರಿದರು.


ಪ್ರಮುಖರಾದ ಕೆ.ಎಸ್.ಮಹೇಶ್, ವಿನಾಯಕ, ಎಂ.ಕೆ.ಸುಬ್ರಮಣಿ, ಪಿ.ಜಿ.ಮಂಜುನಾಥ, ಪಿ.ಜಿ.ಕಮಲ್, ಎಂ.ಬಿ.ವಿಷ್ಣು, ಚೇತನ್ ಇತರರು ಹಲವು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net