ಸ್ಥಳೀಯ ಅರೆಭಾಷೆ ಬೆಳವಣಿಗೆಗೆ ಕೈಜೋಡಿಸಿ: ಕೆ.ಜಿ.ಬೋಪಯ್ಯ

29adarshkdga11
Published on

ಮಡಿಕೇರಿ: ಕನ್ನಡನಾಡಿನಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ, ಜೊತೆಗೆ ಕನ್ನಡ ಉಪ ಭಾಷೆಯಾದ ಸ್ಥಳೀಯ ಅರೆಭಾಷೆಯನ್ನು ಉಳಿಸಿ ಬೆಳೆಸುವುದು ಅತ್ಯಗತ್ಯ ಎಂದು ಶಾಸಕರು ಹಾಗೂ ರಾಜ್ಯ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ.ಬೋಪಯ್ಯರವರು ಪ್ರತಿಪಾದಿಸಿದರು.


ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೊಡಗು ಗೌಡ ಸಮಾಜದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಮತ್ತು ದಶವರ್ಷ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಸ್ಥಳೀಯ ಭಾಷೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಅರೆಭಾಷೆ, ಕೊಡವ, ತುಳು, ಕೊಂಕಣಿ, ಬ್ಯಾರಿ ಸೇರಿದಂತೆ ಹಲವು ಅಕಾಡೆಮಿಗಳನ್ನು ಸ್ಥಾಪಿಸಿದೆ. ಆ ನಿಟ್ಟಿನಲ್ಲಿ ಅಕಾಡೆಮಿಗಳ ಜೊತೆ ಎಲ್ಲರೂ ಕೈಜೋಡಿಸುವಂತಾಗಬೇಕು ಎಂದು ಕರೆ ನೀಡಿದರು.


ಅರೆಭಾಷೆ ಅಕಾಡೆಮಿ ವತಿಯಿಂದ ಕಳೆದ ೧೦ ವರ್ಷದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಬಂಧಿಸಿದಂತೆ ಪುಸ್ತಕ ಪ್ರಕಟಣೆ, ಸಂಶೋಧನೆ, ಸಾಹಿತ್ಯ ಚಟುವಟಿಕೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರೆಭಾಷೆ ಸಾಹಿತ್ಯ ಬೆಳವಣಿಗೆಗೆ ಶ್ರಮಿಸಲಾಗಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯುವಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಿದೆ. ಕೊಡಗು ಜಿಲ್ಲೆಯಲ್ಲಿ ಎಲ್ಲಾ ಭಾಷಿಕರೂ ಒಟ್ಟುಗೂಡಿದಾಗ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ನುಡಿದರು.


ಯಾವುದೇ ಕ್ಷೇತ್ರದಲ್ಲೂ ಸಹ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದಂತೆ ಅಭಿಮಾನ ಇರಬೇಕು. ಆದರೆ ದುರಭಿಮಾನ ಇರಬಾರದು. ಆ ನಿಟ್ಟಿನಲ್ಲಿ ಭಾಷೆ ಉಳಿಸಿ ಬೆಳೆಸುವಲ್ಲಿ ಪ್ರಯತ್ನಗಳು ಮುಂದುವರೆಯಬೇಕು. ರಾಷ್ಟ್ರವು ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿದೆ. ಒಂದು ಊರಿನಿಂದ ಮತ್ತೊಂದು ಊರಿಗೆ ಆಚಾರ-ವಿಚಾರದಲ್ಲಿ ವಿಭಿನ್ನತೆ ಇರುವುದನ್ನು ಕಾಣುತ್ತೇವೆ. ರಾಷ್ಟ್ರದಲ್ಲಿ ಹಲವು ಭಾಷೆಗಳಿದ್ದು, ಕೆಲವು ಭಾಷೆಗಳು ನಶಿಸುವತ್ತ ಸಾಗುತ್ತಿವೆ. ಆದ್ದರಿಂದ ಸರ್ಕಾರವು ಅಕಾಡೆಮಿ ಸ್ಥಾಪನೆ ಮಾಡುವ ಮೂಲಕ ಸ್ಥಳೀಯ ಭಾಷೆಗಳನ್ನು ಉಳಿಸಿ ಬೆಳೆಸಲು ಮುಂದಾಗಿದೆ ಎಂದರು.


ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮಾತನಾಡಿ, ಆಯಾಯ ಸ್ಥಳೀಯ ಮಾತೃ ಭಾಷೆಗಳು ಉಳಿದಾಗ ಮಾತ್ರ ಆಚಾರ-ವಿಚಾರ, ಸಂಸ್ಕೃತಿಯನ್ನು ಉಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಅರೆಭಾಷೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದರು.


ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಇದರಿಂದ ನಾಗರಿಕತೆಯನ್ನು ಉಳಿಸಿಕೊಂಡು ಹೋಗಲು ಸಾಧ್ಯ. ಕೊಡಗು ಜಿಲ್ಲೆಯಲ್ಲಿ ಹಬ್ಬ ಹರಿದಿನಗಳು, ಉಡುಗೆ, ತೊಡುಗೆ ವಿಭಿನ್ನವಾಗಿದ್ದು, ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಮಾತನಾಡಬೇಕು. ಅರೆಭಾಷೆ ಮಾತನಾಡುವ ಮೂಲಕ ಸಂಸ್ಕೃತಿಯನ್ನು ಉಳಿಸಬೇಕು. ಸಾಮರಸ್ಯದಿಂದ ಬದುಕಬೇಕು. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.


ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಅಕಾಡೆಮಿ ಮೂಲಕ ವಿಶ್ವಕೋಶ, ಪದಕೋಶ, ನಾಟಕ, ಡಿಜಿಟಲೀಕರಣ, ಚಿತ್ರಕಲೆ, ಪುಸ್ತಕ ಪ್ರಕಟಣೆ, ಸಂಶೋಧನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡು ಅರೆಭಾಷೆಯನ್ನು ಎಲ್ಲೆಡೆ ಫಸರಿಸಲು ಪ್ರಯತ್ನಿಸಲಾಗಿದೆ. ಕೊಡಗು, ದಕ್ಷಿಣ, ಮೈಸೂರು, ಬೆಂಗಳೂರು ಸೇರಿದಂತೆ ಎಲ್ಲೆಡೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರೆಭಾಷೆ ಬೆಳವಣಿಗೆಗೆ ಶ್ರಮಿಸಲಾಗಿದೆ. ಅರೆಭಾಷೆ ಸಂಸ್ಕೃತಿ ಆಚಾರ-ವಿಚಾರಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವಲ್ಲಿ ಕಥೆ, ಕವನ, ಲಲಿತ ಪ್ರಬಂಧ, ಕವಿತೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರೆಭಾಷೆ ಬೆಳವಣಿಗೆಗೆ ಶ್ರಮಿಸಲಾಗಿದೆ ಎಂದು ಕಜೆಗದ್ದೆ ಹೇಳಿದರು.


ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪಿ.ಜಿ.ಅಂಬೆಕಲ್, ರಂಗಭೂಮಿ/ನಾಟಕದಲ್ಲಿ ಸಾಧನೆ ಮಾಡಿರುವ ತುಕಾರಾಮ ಏನೆಕಲ್, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಚಂಡೀರ ಕೆ.ಬಸಪ್ಪ ಅವರಿಗೆ ಅರೆಭಾಷೆ ಅಕಾಡೆಮಿಯ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಶಾಲೂ, ಸ್ಮರಣಿಕೆ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಸುಬ್ರಾಯ ಸಂಪಾಜೆರವರು ಸಂಪಾದಿಸಿರುವ ಅರೆಭಾಷೆ ಸೋಬಾನೆ ಮತ್ತು ಚಂಡೀರ ಕೆ.ಬಸಪ್ಪ ಅವರು ಬರೆದಿರುವ ಅರೆಭಾಷೆ ಸುಪ್ರಭಾತ ಸಿಡಿಯನ್ನು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಕತೆ, ಕವನ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ನಿಕಟ ಪೂರ್ವ ಅಧ್ಯಕ್ಷ ಪಿ.ಸಿ.ಜಯರಾಮ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ರಿಜಿಸ್ಟ್ರಾರ್ ಚಿನ್ನಸ್ವಾಮಿ, ಅಕಾಡೆಮಿ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net