

ಬೀರೂರು: ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಆಚರಣೆ ಮಾಡಲು ಎಲ್ಲರೂ ಸಹಕಾರ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ಎ.ಡಿ.ಶಾಂತಲಾ ಮನವಿ ಮಾಡಿದರು.
ಪುರಸಭೆ ಕಚೇರಿಯಲ್ಲಿ ಶುಕ್ರವಾರ ಪೊಲೀಸ್ ಇಲಾಖೆ, ವಿವಿಧ ಶಾಲಾ ಶಿಕ್ಷಕರು, ಸಂಘಸಂಸ್ಥೆಗಳಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪಟ್ಟಣದ ಕೆಎಲ್‌ಕೆ ಪ್ರೌಢಶಾಲೆ ಮೈದಾನದಲ್ಲಿ ಸಾಮೂಹಿಕವಾಗಿ ಆಚರಿಸಲಾಗುವುದು. ಶಾಲಾ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ವಿದ್ಯಾರ್ಥಿಗಳಿಂದ ಜಾಥಾ ನಡೆಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಿಕೊಂಡು ಬರಬೇಕು ಎಂದು ತಿಳಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜಯದೇವಪ್ಪ ಮಾತನಾಡಿ, ಶಾಲಾ ಮಕ್ಕಳು ಪಥಸಂಚಲನ ನಡೆಸಲು ಬ್ಯಾಂಡ್‌ಸೆಟ್ ನೀಡುವಂತೆ ಮನವಿ ಮಾಡಲಾಗಿತ್ತು. ಈ ವರ್ಷವಾದರೂ ಪಟ್ಟಣದ ಯಾವುದಾದರೂ ಪ್ರೌಢಶಾಲೆಗೆ ಪುರಸಭೆಯಿಂದ ಬ್ಯಾಂಡ್‌ಸೆಟ್ ಖರೀದಿಸಲು ಅನುದಾನ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಪುರಸಭೆ ಸದಸ್ಯ ಲೋಕೇಶಪ್ಪ ಮಾತನಾಡಿ, ಪಟ್ಟಣದ ಎಂ.ಜಿ ವೃತ್ತಕ್ಕೆ ತಿರಂಗ ಬಣ್ಣದ ಲೇಪನ ಮಾಡಿ ಅಲಂಕಾರ ಮಾಡಲಾಗುತ್ತಿತ್ತು. ಆದರೆ 3 ತಿಂಗಳ ಹಿಂದೆ ಅಪಘಾತಕ್ಕೀಡಾಗಿ ವೃತ್ತದ ಕಟ್ಟೆ ಬಿದ್ದು ಹೋಗಿದೆ. ಇದನ್ನು ಮೊದಲು ಸರಿಪಡಿಸುವಂತೆ ಒತ್ತಾಯಿಸಿದರು.
ಪಪಂ ಮುಖ್ಯಾಧಿಕಾರಿ ಶಾಂತಲಾ ಮಾತನಾಡಿ, ವೃತ್ತ ಸರಿಪಡಿಸಲು ಅಂದಾಜು ವೆಚ್ಚ ಸಿದ್ಧಪಡಿಸಲಾಗಿದೆ. ಶೀಘ್ರವೇ ವೃತ್ತವನ್ನು ಸರಿಪಡಿಸಲಾಗುವುದು ಎಂದರು.
ಪುರಸಭೆ ಸದಸ್ಯರಾದ ಮೀನಾಕ್ಷಮ್ಮ, ಮಲ್ಲಿಕಾರ್ಜುನಪ್ಪ, ಲಕ್ಷ್ಮಣ್, ರಘು, ಬಿ.ಆರ್.ಮೋಹನ್‌ಕುಮಾರ್, ಎನ್.ಎಂ.ನಾಗರಾಜ್, ಪಿಎಸ್‌ಐ ಜಿ.ಆರ್.ಸಜಿತ್‌ಕುಮಾರ್, ಶಿಕ್ಷಕರಾದ ಮೈಲಾರಪ್ಪ, ಲೋಕೇಶ್ ಇದ್ದರು.