

ವಿಜಯಪುರ: ಐದು ವರ್ಷದೊಳಗಿನ ಪ್ರತಿ ಮಗುವಿಗೂ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡ ಪೋಲಿಯೋ ಲಸಿಕಾ ಅಭಿಯಾನಕ್ಕೆ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯ 0 ರಿಂದ 5ವರ್ಷದೊಳಗಿನ 2,95,156 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಪೋಲಿಯೋ ನಿರ್ಮೂಲನೆಯಲ್ಲಿ ದೇಶ ಗಣನೀಯ ಸಾಧನೆ ಮಾಡಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದು ಯಾವುದೇ ಮಗು ವಂಚಿತರಾಗದೆೆ ನಿಗದಿತ ಗುರಿ ಸಾಧಿಸುವಂತೆ ಅವರು ಸೂಚಿಸಿದರು.
ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಗಂಭೀರವಾಗಿ ಹಾಗೂ ವಿಶೇಷ ಕಾಳಜಿ ವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದ ಅವರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನಗರ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಒಳಗೊಂಡ ತಂಡಗಳನ್ನು ರಚಿಸಲಾಗಿದ್ದು, ವ್ಯಾಕ್ಸಿನೇಟರ್‌ಗಳು ಹಾಗೂ ಮೇಲ್ವಿಚಾರಣೆಗಾಗಿ ಸಿಬ್ಬಂದಿ ನೇಮಿಸಲಾಗಿದೆ ಮತ್ತು ತಾಲೂಕು ನೋಡಲ್ ಅಧಿಕಾರಿಗಳನ್ನು ಆಯಾ ತಾಲೂಕಿಗಳಿಗೆ ಮೇಲ್ವಿಚಾರಣೆ ಮಾಡಲು ಅದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಆಯಾ ಭಾಗದ ಉಸ್ತುವಾರಿ ಹೊಂದಿರುತ್ತಾರೆ.
ಜಿಲ್ಲೆಯ 0-5 ವರ್ಷದ ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಅವರು ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಜಿಲ್ಲಾಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಕಾಯಕಲ್ಪ ಸೇರಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕರೊನಾ ಸಂದರ್ಭದಲ್ಲಿ ಜಿಲ್ಲೆಯ ವೈದ್ಯರು ಹಗಲು ರಾತ್ರಿ ಕಾರ್ಯನಿರ್ವಹಿಸುವ ಮೂಲಕ ಮಾದರಿಯಾಗಿದ್ದಾರೆ. ದೇಶವನ್ನು ಪೋಲಿಯೋ ಮುಕ್ತವೆಂದು ಘೋಷಿಸಲಾಗಿದೆ ಎಂದರು.
ಮಹಾಪೌರ ಮಹೇಜಬಿನ್ ಹೊರ್ತಿ, ಉಪಮಹಾಪೌರ ದಿನೇಶ ಹಳ್ಳಿ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಆರ್‌ಸಿಎಚ್ ಡಾ. ಕೆ.ಡಿ. ಗುಂಡಬಾವಡಿ ಮತ್ತಿತರರಿದ್ದರು.