

ಮೈಸೂರು: ವಿಕಸಿತ ಭಾರತ, ಶ್ರೇಷ್ಠ ಭಾರತ ನಿರ್ಮಾಣಕ್ಕಾಗಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಬಿಜೆಪಿ ನಗರ ಘಟಕದ ವತಿಯಿಂದ ನಗರದ ಪಕ್ಷ ಕಚೇರಿ ಎದುರು ಗುರುವಾರ ಆಯೋಜಿಸಿದ್ದ ‘ಬಿಜೆಪಿ ಸದಸ್ಯತ್ವ ಅಭಿಯಾನ-2024’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಮಾಡಿದ್ದು, ಇದರ ಉದ್ದೇಶದಿಂದ ಬಿಜೆಪಿ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗಿದೆ. ಇದನ್ನು ಸಾಕಾರಗೊಳಿಸಲು ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಸಂವಿಧಾನಕ್ಕೆ ಬದ್ಧವಾಗಿ ಆಡಳಿತ ನಡೆಸುತ್ತಿರುವ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ. ತತ್ವ-ಸಿದ್ಧಾಂತ ಅಡಿಯಲ್ಲಿ ಕೆಲಸ ಮಾಡುತ್ತಿದೆ. ದೇಶದ ಹಿತರಕ್ಷಣೆಗಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯತ್ವ ರೂಪಿಸಲಾಗಿದೆ. ಬಿಜೆಪಿ ಕಾರ್ಯಕರ್ತರು ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಕ್ಷದ ಸದಸ್ಯತ್ವ ಪಡೆದುಕೊಳ್ಳುವಂತೆ ಉತ್ತೇಜಿಸಬೇಕು ಎಂದರು
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಪ್ರತಿ 6 ವರ್ಷಗಳಿಗೊಮ್ಮೆ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಮೊಬೈಲ್ ಸಂಖ್ಯೆ 88000 02024ಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು.
ಪ್ರತಿ ಬೂತ್‌ನಲ್ಲಿ 300 ಜನರ ಸದಸ್ಯತ್ವ ನೋಂದಣಿಗೆ ಪಕ್ಷ ಗುರಿ ನೀಡಿದ್ದು, ಕಾರ್ಯಕರ್ತರು, ಪದಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರು ಪಕ್ಷದ ಸದಸ್ಯತ್ವ ಪಡೆದುಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಇದರೊಂದಿಗೆ ಮತದಾನ ಪರಿಷ್ಕರಣೆ ಕೆಲಸವೂ ಆಗಬೇಕು. ಮುಂದಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದು ಮಹತ್ವ ಪಾತ್ರ ವಹಿಸುತ್ತದೆ ಎಂದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಸೆ.2ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ಮಟ್ಟದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆಯನ್ನು ನೀಡಿದ್ದು, ರಾಜ್ಯ ಮಟ್ಟ ಅಭಿಯಾನವನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಸದಸ್ಯತ್ವ ಸೃಷ್ಟಿಸಲು ಅವಕಾಶ ಇದೆ. ಹೀಗಾಗಿ, ಈ ನಿಟ್ಟಿನಲ್ಲಿ ಕಾರ್ಯಕರ್ತರು ಪರಿಶ್ರಮಿಸಬೇಕು ಎಂದರು.
ಮುಂಬರುವ ಪಾಲಿಕೆ, ಜಿಪಂ, ತಾಪಂ, ಗ್ರಾಪಂ ಚುನಾವಣೆಗಳು ಕಾರ್ಯಕರ್ತರ ಚುನಾವಣೆಯಾಗಿದ್ದು, ಇದರಲ್ಲಿ ಯಶಸ್ಸು ಸಿಗಬೇಕಾದರೆ ಸದಸ್ಯತ್ವ ಶಕ್ತಿ ಮುಖ್ಯ. ಆದ್ದರಿಂದ ಇದರ ಮಹತ್ವ ಅರಿತು ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.
ಬಿಜೆಪಿ ಉಪಾಧ್ಯಕ್ಷ ಎಂ.ರಾಜೇಂದ್ರ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಡಾ.ಲಕ್ಷ್ಮೀ ಅಶ್ವಿನಿಗೌಡ, ಗಿರಿಧರ್, ಕವೀಶ್ ಗೌಡ, ಸಂದೇಶ್ ಸ್ವಾಮಿ, ಬಿ.ಪಿ.ಮಂಜುನಾಥ್, ಎನ್.ವಿ.ಪಣೀಶ್ ಇನ್ನಿತರರಿದ್ದರು.