

ಜಮಖಂಡಿ: ವಿಶ್ವ ಹಿಂದು ಪರಿಷತ್ ಹಿಂದುಗಳನ್ನು ಒಗ್ಗೂಡಿಸುವ ಮಹಾನ್ ಕಾರ್ಯದಲ್ಲಿ ತೊಡಗಿದೆ ಎಂದು ಹಿಂದು ಮುಖಂಡ ಉಮೇಶ ಆಲಮೇಲಕರ ಹೇಳಿದರು.
ನಗರದ ಹನುಮಾನ ದೇವಸ್ಥಾನದಲ್ಲಿ ಶುಕ್ರವಾರ ಬಜರಂಗದಳದ 40 ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಜರಂಗದಳವು ವಿಶ್ವಹಿಂದು ಪರಿಷತ್‌ನ ಯುವ ವಿಭಾಗವಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯ ಚಟುವಟಿಕೆ ಮಾಡುತ್ತಿರುವ ಸಮಾಜದ ವಿಭಿನ್ನ ವರ್ಗಗಳ ಪೂಜ್ಯ ಮಠಾಧೀಶರ ಸಾಧು ಸಂತರ ಮಾರ್ಗದರ್ಶನವು ಸಂಘಟನೆಗಿದೆ ಎಂದರು.
ಹಿಂದು ಸಮಾಜದ ಮೇಲೆ ಆಗುತ್ತಿರುವ ಪರಕೀಯ ಮತಗಳ ಆಕ್ರಮಣ ಭಯೋತ್ಪಾದನೆ, ಮತಾಂತರ, ಲವ್ ಜಿಹಾದ್ ಮೂಲಕ ಆಗುತ್ತಿರುವ ದೇಶ ವಿದ್ರೋಹಿ ಶಕ್ತಿಗಳ ಚಟುವಟಿಕೆ ಸಮರ್ಥವಾಗಿ ಎದುರಿಸಿ ಹಿಂದು ಸಮಾಜದ ರಕ್ಷಣೆಗಾಗಿ ಯುವಕರು ಬಜರಂಗದಳ ಸೇರಬೇಕು ಎಂದರು.
ಹಿಂದು ಸಮಾಜದ ಸೇವೆ, ಸುರಕ್ಷೆ, ಸಂಸ್ಕಾರ, ಧ್ಯೇಯ ವಾಕ್ಯಗಳ ಅಡಿಯಲ್ಲಿ ಹಿಂದು ಸಮಾಜದ ತರುಣಶಕ್ತಿ ಬಜರಂಗದಳ ಮೂಲಕ ತನ್ನ ಶಕ್ತಿ ಸಾಮರ್ಥವನ್ನು ರಾಷ್ಟ್ರಾದ್ಯಂತ ಪ್ರಕಟಿಸುತ್ತಿದೆ ಎಂದರು.
ಹಿಂದುಗಳ ಮಾನಬಿಂದುಗಳಾದ ಗೋ ರಕ್ಷಣೆ, ಸ್ತ್ರೀ ರಕ್ಷಣೆ, ಮಠ ಮಂದಿರಗಳ ರಕ್ಷಣೆಗಾಗಿ ಹೋರಾಡುವ ಜತೆಗೆ ಅಸ್ಪತೃಶ್ಯತೆ, ಮೇಲು, ಕೀಳು ಎಂಬ ಭಾವನೆ ತೊಲಗಿಸುವ ಕಾರ್ಯ ಮಾಡುತ್ತಿದೆ ಎಂದರು.
ನಗರದ ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಉಮೇಶ ಸಿದರಡ್ಡಿ, ಸಾಗರ ಜಂಭಗಿ, ರಾಜೇಶ ಲಗಳಿ, ಪುಂಡಲೀಕ ಲೋಣಾರಿ, ಅಜೇಯ ಗಾಯಕವಾಡ, ಚಂದ್ರಕಾಂತ ಮೋದಿ, ಅಡವೇಶ ಆಲಬಾಳ, ಗಿರೀಶ ಕಂಗನಾಳ, ಶ್ರೀನಿವಾಸ ಶಿಂಧೆ ಇತರರಿದ್ದರು.