ಪರಿಶಿಷ್ಟ ಪಂಗಡ ವಿಚಾರ-ದೆಹಲಿಯ ಆರ್‌ಜಿಐ ಅಧಿಕಾರಿಗಳನ್ನು ಭೇಟಿಯಾದ ಜೊಯಿಡಾದ ಕುಣಬಿ ನಿಯೋಗ

kunabi-leaders-met-rgi
Published on

ಕಾರವಾರ: ಜಿಲ್ಲೆಯ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಭಾರತ ಸರ್ಕಾರದ ರಿಜಿಸ್ಟ್ರಾರ್‌ ಜನರಲ್ ಅವರನ್ನು ಗುರುವಾರ ನವದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿದ್ದು, ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕುಣಬಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಷ ಗಾವಡಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಣಬಿ ಸಮಾಜವು ಪರಿಶಿಷ್ಟ ಪಂಗಡಕ್ಕೆ ಸೇರುವ ಎಲ್ಲ ಅರ್ಹತೆ ಹೊಂದಿದೆ. ಕಳೆದ 30 ವರ್ಷಗಳಿಂದ ಈ ಸಂಬಂಧ ಹೋರಾಟ ನಡೆಸಿದ್ದರೂ ಇದುವರೆಗೂ ಪ್ರಯೋಜನವಾಗಿಲ್ಲ. ಕುಣಬಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಶಿಫಾರಸು ಮಾಡಿ 2017 ರಲ್ಲಿ ರಾಜ್ಯ ಸರ್ಕಾರವು ಪ್ರಸ್ತಾವನೆಯನ್ನು ಭಾರತ ಸರ್ಕಾರಕ್ಕೆ ಕಳಿಸಿದೆ. ಪ್ರಸ್ತಾವನೆ ರಿಜಿಸ್ಟ್ರಾರ್‌ ಜನರಲ್ ಆಫ್ ಇಂಡಿಯಾ ಅವರ ಬಳಿ ಇದ್ದು, ಮುಂದಿನ ಬೆಳವಣಿಗೆ ಆಗಿರಲಿಲ್ಲ.
ನಮ್ಮ ಹಕ್ಕಿಗಾಗಿ ಆಗ್ರಹಿಸಿ ಕಳೆದ ಒಂದು ವಾರದಿಂದ ನಾವು ಜೊಯಿಡಾದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದೆವು. ಗೋವಾದ ಸ್ಪೀಕರ್ ಸ್ವತಃ ಕುಣಬಿ ಸಮಾಜಕ್ಕೆ ಸೇರಿದ ರಮೇಶ ತವಡಕರ್ ಅವರು ನಮ್ಮ ನಿಯೋಗವನ್ನು ದೆಹಲಿಗೆ ಕರೆದೊಯ್ದರು. ಭಾರತ ಸರ್ಕಾರದ ರಿಜಿಸ್ಟ್ರಾರ್‌ ಜನರಲ್ (ಆರ್‌.ಜಿ.ಐ.) ಮೃತ್ಯುಂಜಯ ಕುಮಾರ ನಾರಾಯಣನ್ ಹಾಗೂ ಡೆಪ್ಯುಟಿ ರಿಜಿಸ್ಟಾçರ್ ಜನರಲ್ ಮನೋಜ ಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಇಬ್ಬರೂ ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡಿದ್ದಾರೆ.ಇದರಿಂದ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ ಎಂದರು.
ಗ್ರೀನ್ ಇಂಡಿಯಾ ಫೌಂಡೇಶನ್‌ನ ಮಹೇಂದ್ರಕುಮಾರ್ ಮಾತನಾಡಿ, ಗೋವಾದಲ್ಲಿ ಕುಣಬಿ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಆದರೆ,ಅವರದೇ ರಕ್ತ ಸಂಬಂಧಿಗಳಾದ ಜೊಯಿಡಾ,ಯಲ್ಲಾಪುರ, ದಾಂಡೇಲಿ ಭಾಗದ ಕುಣಬಿಗಳು ಎಸ್‌ಟಿಗೆ ಸೇರದಿರುವುದು ದುರಂತ. ಒಮ್ಮೆ ಕೇಂದ್ರ ಸರ್ಕಾರ ಪ್ರಸ್ತಾವನೆ ತಿರಸ್ಕರಿಸಿತ್ತು.
2014 ರಿಂದ ಮೈಸೂರು ವಿವಿ ಮಾನವ ಶಾಸ್ತç ವಿಭಾಗದ ಗಂಗಾಧರ ಅವರು ಕುಲಶಾಸ್ತ್ರೀಯ ಅಧ್ಯಯನ ನಡೆಸಿದ್ದು, ಅದನ್ನಾಧರಿಸಿ ಕರ್ನಾಟಕ ಸರ್ಕಾರವು ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತಾವನೆ ಆರ್‌ಜಿಐ ಬಳಿ ಇದೆ. 2 ಬಾರಿ ಆರ್‌ಜಿಐ ಕೆಲವು ಸ್ಪಷ್ಟನೆಗಳನ್ನು ಕೇಳಿದೆ. ಅದಕ್ಕೆ ಕರ್ನಾಟಕ ಸರ್ಕಾರ ಉತ್ತರ ನೀಡಿಲ್ಲ ಎಂಬುದು ಆರ್‌ಜಿಐ ಅಧಿಕಾರಿಗಳ ಅಭಿಪ್ರಾಯ. ಕರ್ನಾಟಕ ಸರ್ಕಾದರ ಸಮಾಜ ಕಲ್ಯಾಣ ಇಲಾಖೆಯಿಂದ ನಡೆದ ಪತ್ರ ವ್ಯವಹಾರಗಳ ದಾಖಲೆ ಸಂಗ್ರಹಿಸಿ ಆರ್‌ಜಿಐಗೆ ಸಲ್ಲಿಸಲು ನಾವು ನಿರ್ಧರಿಸಿದ್ದೇವೆ. ಕುಣಬಿಗಳ ಜೀವನ ಸ್ಥಿತಿಯನ್ನು ಸ್ವತಃ ಬಂದು ಅರಿಯುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಅದಕ್ಕೆ ಅವರೂ ಒಪ್ಪಿಕೊಂಡಿದ್ದಾರೆ ಎಂದರು.
ತಾಲೂಕು ಸಂಘದ ಅಧ್ಯಕ್ಷ ಅಜಿತ ಮಿರಾಶಿ, ಸಮಾಜದ ಪ್ರಮುಖರಾದ ನಾರಾಯಣ ಕುಣಬಿ, ಚಂದ್ರಶೇಖರ ಸಾವರ್ಕರ್, ನಾರಾಯಣ ವೇಳೀಪ, ಮಾಬ್ಲು ಕುಂಡಲಕರ್, ಎಲ್.ಎಂ.ಗಾಂವಕರ್, ಪ್ರೇಮಾನಂದ ವೇಳೀಪ, ಪ್ರಭಾಕರ ವೇಳೀಪ, ಸಮೀರ ವೇಳೀಪ, ಮಾಬ್ಲೇಶ್ವರ ಕುಣಬಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net