

ಬೇಲೂರು: ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸದಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ತಾಲೂಕಿನ ಕುಶಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡನಹಳ್ಳಿ(ಜೋಗಿ ಕೊಪ್ಪಲು) ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಚೌಡನಹಳ್ಳಿ ಗ್ರಾಮದ ಮುಖಂಡ ಸೋಮಶೇಖರ್ ಹಾಗೂ ಪುಟ್ಟಸ್ವಾಮಿ ಮಾತನಾಡಿ, ಗ್ರಾಮದಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಅಭಿವೃದ್ಧಿಯಿಂದ ಹಿಂದುಳಿದಿದೆ. ಚರಂಡಿ, ಸರಿಯಾದ ರಸ್ತೆ ಇಲ್ಲ. ಚುನಾವಣೆ ಸಂದರ್ಭ ಮತ ಕೇಳಲು ಬರುವ ರಾಜಕಾರಣಿಗಳು ಇಲ್ಲಸಲ್ಲದ ಭರವಸೆ ನೀಡಿ ಮತ ಪಡೆದು ಹೋದವರು ಮತ್ತೆ ಗ್ರಾಮದತ್ತ ತಿರುಗಿ ನೋಡಿಲ್ಲ ಎಂದು ದೂರಿದರು.
ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ಮನೆಗಳಿಗೆ ನೀರು ನುಗ್ಗಿ ಕುಸಿಯುವ ಹಂತ ತಲುಪಿವೆ. ಜತೆಗೆ ಮಕ್ಕಳು ಶಾಲೆಗೆ ಹೋಗಲು ಮತ್ತು ಆಟವಾಡಲು ಅವಕಾಶ ಇಲ್ಲದಂತಾಗಿದೆ. ಚರಂಡಿಗಳಿಲ್ಲದೆ ನೀರು ನಿಂತು ಅನಾರೋಗ್ಯ ಭೀತಿ ಕಾಡುತ್ತಿದೆ. ಆದ್ದರಿಂದ ನಮ್ಮ ಗ್ರಾಮಕ್ಕೆ ಚುನಾವಣೆಯೊಳಗೆ ಸೌಲಭ್ಯ ಕಲ್ಪಿಸದಿದ್ದಲ್ಲಿ ಮತದಾನದಿಂದ ದೂರ ಉಳಿಯುವುದಾಗಿ ಎಚ್ಚರಿಸಿದರು.
ಗ್ರಾಮದ ರುದ್ರಮ್ಮ ಮಾತನಾಡಿ, ಗ್ರಾಮದಲ್ಲಿ ಅಂಗನವಾಡಿ ಕೇಂದ್ರವಿಲ್ಲ. ಇಲ್ಲಿರುವ ಬಹುತೇಕರು ಕೂಲಿ ಕಾರ್ಮಿಕರಾಗಿದ್ದು, ಶೌಚಗೃಹ, ಮನೆಗಳಿಲ್ಲದೆ ಗುಡಿಸಲಿನಲ್ಲಿ ವಾಸಿಸುವಂತ್ತಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸುತ್ತಿಲ್ಲ. ಚೌಡನಹಳ್ಳಿಯಲ್ಲಿ 200 ಮತದಾರರಿದ್ದರೂ ಯಾವುದೇ ಸೌಲಭ್ಯವಿಲ್ಲ. ಗ್ರಾಮಕ್ಕೆ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಸಮುದಾಯ ಭವನ, ಮಿನಿ ಅಂಗನವಾಡಿ ಇನ್ನಿತರ ಸವಲತ್ತುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಧರ್ಮರಾಜು, ಧರ್ಮಯ್ಯ, ಜಯಲಕ್ಷ್ಮೀ, ಶಿವಮ್ಮ, ಪುಟ್ಟಮ್ಮ, ಪುಟ್ಟಸ್ವಾಮಿ. ಜಗದೀಶ್ ಸೇರಿದಂತೆ ಇತರರಿದ್ದರು.