

ಬೆಂಗಳೂರು: ತೃತೀಯಲಿಂಗಿಗಳಿಗಳಿಗೆ ಸರಿಯಾದ ಶಿಕ್ಷಣ ನೀಡಬೇಕಿದೆ ಎಂದು ಜೋಗತಿ ನೃತ್ಯ ಕಲಾವಿದೆ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ತಮ್ಮ ಬದುಕಿನ ಹಾದಿ ನೆನಪಿಸಿಕೊಂಡರು.
ತೃತೀಯ ಲಿಂಗಿಗಳಿಗೆ ಸರಿಯಾದ ಶಿಕ್ಷಣ ಸಿಗುವಂತೆ ಸರ್ಕಾರ ನೋಡಿಕೊಂಡರೆ ಅವರೂ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರ ಅವರಿಗೆ ಶಿಕ್ಷಣ ನೀಡಲು ಮುಂದಾಗಬೇಕು. ನಾನು ಕೂಡ ಅಂಥವರಿಗಾಗಿ ಕಾರ್ಯಕ್ರಮ ರೂಪಿಸುತ್ತೇನೆ ಎಂದರು.
ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರಿಂದ ವಿವಿಧ ಪ್ರಶಸ್ತಿಗಳು ನನ್ನನ್ನು ಅರಸಿಕೊಂಡು ಬಂದಿವೆ. ನನ್ನಿಂದ ದೂರವಾಗಿದ್ದ ನನ್ನವರು, ನೆಂಟರು ಈಗ ನಮ್ಮ ಮನೆಗೆ ಬರುತ್ತಿದ್ದಾರೆ. ಎಲ್ಲರನ್ನೂ ಒಟ್ಟುಗೂಡಿಸುವ ಜತೆಗೆ ನಾಟಕ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೂ ತಂದು ಕೂರಿಸಿದ ಜೋಗತಿ ಕಲೆಗೆ ನಾನು ಚಿರಋಣಿ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಮತ್ತಿತರರು ಇದ್ದರು.
ಹೊಸಪೇಟೆ ತುಂಗಾಭದ್ರಾ ನದಿಯಲ್ಲಿ ಹಿರಿಯ ಜೋಗತಿ ನನ್ನ ಉಡದಾರ ಹರಿದು ಹೆಣ್ಣಿನ ಉಡುಗೆ ತೊಡಿಸಿ ದೀಕ್ಷೆ ನೀಡಿದಾಗ ಅದನ್ನು ಕಂಡ ನನ್ನವ್ವ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅವರ ಆ ನೋವು ನನಗೀಗ ಅರ್ಥವಾಗುತ್ತಿದೆ. ಅವ್ವನ 21 ಮಕ್ಕಳಲ್ಲಿ ಉಳಿದಿದ್ದು 2 ಗಂಡು 2 ಹೆಣ್ಣು ಮಾತ್ರ. 6ನೇ ತರಗತಿಯಲ್ಲಿ ಇರುವಾಗಲೇ ನನ್ನಲ್ಲಿ ಹೆಣ್ತನ ಕಾಣಿಸಿತು. ಉಡುಗೆ-ತೊಡುಗೆ ಹಾವ-ಭಾವ ಎಲ್ಲವೂ ಹೆಣ್ಣಿನಂತೇ ಇತ್ತು ಎಂದರು.
ಇಡ್ಲಿ ಮಾರಾಟ ಮಾಡಿದ ಮಂಜಮ್ಮ
ಬಳ್ಳಾರಿಯಲ್ಲಿದ್ದಾಗ ನಾನು ಬ್ಲಾ್ಯಕ್ ಬ್ಯೂಟಿ ಎಂದು ಹೆಸರುವಾಸಿ ಆಗಿದ್ದೆ. ಆಗಿನ ಜೋಗತಿಯರ ಉಡುಗೆಗಳು ಮಾಡರ್ನ್ ಆಗಿ ಇರುತ್ತಿರಲಿಲ್ಲ. ನಾನು ಎಸ್ಎಸ್ಎಲ್ಸಿವರೆಗೂ ಓದಿದ್ದೆ. ಹೀಗಾಗಿಯೇ ಸ್ವಲ್ಪ ಮಾಡರ್ನ್ ಆಗಿದ್ದೆ. ಪ್ರೌಢಶಾಲಾ ಮಕ್ಕಳಿಗೂ ಪಾಠ ಮಾಡುತ್ತಿದ್ದೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಇಡ್ಲಿ ಮಾರಾಟ ಮಾಡಿದೆ ಎಂದು ಮಂಜಮ್ಮ ಜೋಗತಿ ತನ್ನ ಬದುಕಿನ ಹೋರಾಟದ ದಿನಗಳನ್ನು ನೆನಪಿಸಿಕೊಂಡರು.
ಮನೆಯಿಂದ ಹೊರಬಿದ್ದ ನಂತರ ದೇವಸ್ಥಾನಗಳಲ್ಲಿ ಅವರಿವರ ಮನೆಯಲ್ಲಿ ದಿನ ಕಳೆಯುತ್ತಿದ್ದೆ. ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಂಡೆ. ಜೋಗತಿ ನೃತ್ಯ ಕಲಿತೆ. ಯಾವುದೇ ಹಳ್ಳಿಗಳಲ್ಲಿ ನೃತ್ಯ ಮತ್ತು ನಾಟಕಗಳನ್ನು ಮಾಡುವಾಗ ಅಣ್ಣ ನಿಮ್ಮ ಹೆಂಡ್ತೀರ ಹಳೇ ಸೀರೆ ಇದ್ರೆ ಕೊಡಿ. ಕಾಲಿಗೆ ಕಟ್ಟಿಕೊಳ್ಳಲು ಎತ್ತಿನ ಹಳೇ ಗೆಜ್ಜೆ ಕೊಡಿ ಎಂದು ಬೇಡುತ್ತಿದ್ದೆ. ಒಂದು ಹೊತ್ತಿನ ಊಟಕ್ಕಾಗಿ ಬಹಳಷ್ಟು ಪರಿತಪಿಸುತ್ತಿದ್ದೆ. ಹಸಿವಿನ ಆ ದಿನಗಳು ಇಂದಿಗೂ ಪಾಠವಾಗಿದೆ. | ಮಂಜಮ್ಮ ಜೋಗತಿ ಹಿರಿಯ ಜೋಗತಿ ನೃತ್ಯಕಲಾವಿದೆ
ನನ್ನವ್ವ ನನ್ನ ಹಿಂದೆ ಬಂದಿದ್ದರು...
ನಮ್ಮದು ವ್ಯಾಪಾರಸ್ಥರ ಕುಟುಂಬ. ನನ್ನಲ್ಲಿನ ಬದಲಾದ ಈ ಗುಣ ಮನೆಯವರಲ್ಲಿ ಅಸಹನೆ ಮೂಡಿಸಿತು. ಪ್ರೌಢಶಿಕ್ಷಣ ಹಂತಕ್ಕೆ ಬರುವ ವೇಳೆಗೆ ನಾನು ಸಂಪೂರ್ಣ ಹೆಣ್ಣಾಗಿ ಬದಲಾಗಿದ್ದೆ. ಜತೆಗೆ ನನ್ನೊಳಗಿನ ಭಾವನೆ ಕೂಡ ಬಹಳಷ್ಟು ಬದಲಾಗಿತ್ತು. ಮನೆಯಲ್ಲಿ ಏನೂ ಮಾಡಲು ಬಿಡುತ್ತಿರಲಿಲ್ಲ. ಇದರಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿದ್ದೆ. ಆ ನಂತರ ನನ್ನನ್ನು ಮನೆಯಿಂದ ಹೊರಹಾಕಲಾಯಿತು. ನನ್ನ ಸ್ಥಿತಿಕಂಡು ಕಣ್ಣೀರಿಟ್ಟ ನನ್ನವ್ವ ನನ್ನ ಹಿಂದೆಯೇ ಸ್ವಲ್ಪದೂರ ಬಂದಿದ್ದರು ಎಂದು ನೆನಪಿಸಿಕೊಂಡ ಮಂಜಮ್ಮ ಭಾವುಕರಾದರು.