

ಬೆಳಗಾವಿ: ಗೋಕಾಕ ಫಾಲ್ಸ್‌ಗೆ ಹೈಟೆಕ್ ಸ್ಪರ್ಶ ನೀಡಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಾಲ್ಸ್ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 1 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗುವುದು.
ಕರೊನಾ ಕಾರಣದಿಂದಾಗಿ ಯೋಜನೆ ಕಾರ್ಯಾರಂಭ ವಿಳಂಬವಾಗಿದೆ. ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಜೋಗ ಜಲಪಾತ ಮಾದರಿಯಲ್ಲಿ ಗೋಕಾಕ ಫಾಲ್ಸ್ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಗ್ರಾಪಂ ಸದಸ್ಯರಿಗೆ ಸನ್ಮಾನ: ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಅಧಿಕ ಪ್ರಮಾಣದಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಬಹುತೇಕ ಎಲ್ಲ ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಗೇ ಅಧಿಕಾರದ ಗದ್ದುಗೆ ಸಿಗಲಿದೆ ಎಂಬ ಮಾಹಿತಿ ಬಂದಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲು ಪಕ್ಷದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಬಜೆಟ್‌ನಲ್ಲಿ ನೀರಾವರಿಗೆ ಆದ್ಯತೆ: 2021-22ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕೃಷಿ ಮತ್ತು ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ಸಿಗಲಿದೆ. ಏತ ನೀರಾವರಿ, ಕೃಷಿ ಭೂಮಿ ನೀರಾವರಿ ಸೇರಿ ಹೊಸ ಯೋಜನೆಗಳು ಬಜೆಟ್‌ನಲ್ಲಿ ಘೋಷಣೆ ಆಗಲಿವೆ. ಅಲ್ಲದೆ, ಬೆಳಗಾವಿ ಜಿಲ್ಲೆಯಲ್ಲಿ 12 ಹೊಸ ಏತ ನೀರಾವರಿ, ಬಳ್ಳಾರಿ ನಾಲಾ ನೀರಾವರಿ ಯೋಜನೆಗೆ ಅಣೆಕಟ್ಟು ನಿರ್ಮಾಣ, ಗಟ್ಟಿ ಬಸವಣ್ಣ ನೀರಾವರಿ ಯೋಜನೆಗಳ ಜತೆಗೆ ಪ್ರಗತಿ ಹಂತದಲ್ಲಿರುವ ಯೋಜನೆಗಳಿಗೆ ವೇಗ ನೀಡಲಾಗುವುದು ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ಲಸಿಕೆಗಿಲ್ಲ ಶುಲ್ಕ: ಜಿಲ್ಲೆಯ ಮೂರು ಕಡೆಗಳಲ್ಲಿ ಕರೊನಾ ಲಸಿಕೆ ವಿತರಣೆಯ ತಾಲೀಮನ್ನು ಅತ್ಯಂತ ಯಶಸ್ವಿಯಾಗಿ ಮಾಡಲಾಗಿದೆ. ಕರೊನಾ ವೈರಸ್ ಬೇರು ಸಮೇತ ಕಿತ್ತೊಗೆಯಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಕರೊನಾ ಲಸಿಕೆಗೆ ಶುಲ್ಕ ವಿಧಿಸುತ್ತಾರೆ ಎಂಬ ವದಂತಿ ಹಬ್ಬುತ್ತಿದೆ. ಆದರೆ, ರಾಜ್ಯದ ಎಲ್ಲ ಜನರಿಗೆ ಉಚಿತವಾಗಿ ಕೋವಿಡ್-19 ಲಸಿಕೆ ನೀಡುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಲಸಿಕೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ರಮೇಶ ಮಾಹಿತಿ ನೀಡಿದರು.
ಸಚಿವ ಸಂಪುಟ ವಿಸ್ತರಣೆ ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಆದರೂ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಲು ಕೋರಲಾಗಿದ್ದು, ಜ. 15ರ ಬಳಿಕ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಹುದ್ದೆ ಬದಲಾವಣೆ ಸಾಧ್ಯವಿಲ್ಲ. ಇದನ್ನು ಬಿಎಸ್‌ವೈ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವಾಗಿ ಪ್ರತಿಪಕ್ಷ ನಾಯಕರ ಪ್ರಶ್ನೆಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ. ಕೆಲವರು ತಮ್ಮ ಪ್ರಚಾರಕ್ಕಾಗಿ ಬಿಎಸ್‌ವೈ ಹೆಸರು ಪ್ರಸ್ತಾಪಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.