ಕೈ ಪದಾಧಿಕಾರಿಗಳ ಸಭೆ 10ಕ್ಕೆ
ಡಿಸಿಸಿ ಅಧ್ಯಕ್ಷ ತಂಗಡಗಿ ಮಾಹಿತಿ

IMG-20221008-WA0008.jpg
Published on

ಕೊಪ್ಪಳ: ಭಾರತ್ ಜೋಡೋ ಯಾತ್ರೆ ಅಂಗವಾಗಿ ಬಳ್ಳಾರಿಯಲ್ಲಿ ನಡೆವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಅ.10ರಂದು ಪದಾಧಿಕಾರಿಗಳ ಸಭೆ ನಡೆಸಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಅ.15ರದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸುಮಾರು ಐದು ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ. ನಮ್ಮ ಜಿಲ್ಲೆಯಿಂದ 35ಸಾವಿರ ಜನರನ್ನು ಕರೆದೊಯ್ಯಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಕ್ಷೇತ್ರವಾರು ಸಭೆಗಳನ್ನು ನಡೆಸಲಾಗಿದೆ. ಮತ್ತೊಮ್ಮೆ ಅ.10ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕ, ಸಂಸದರು ಹಾಗೂ ವಿವಿಧ ಪದಾಧಿಕಾರಿಗಳ ಸಭೆ ಹಮ್ಮಿಕೊಳ್ಳಲಾಗಿದೆ. ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿ ಇತರ ನಾಯಕರು ಭಾಗಿಯಾಗಲಿದ್ದಾರೆ. ಕೊಪ್ಪಳದ ಎಂ.ಪಿ.ಪ್ಯಾಲೇಸ್ ನಲ್ಲಿ ಮಧ್ಯಾಹ್ನ 3ಗಂಟೆಗೆ ಕಾರ್ಯಕ್ರಮವಿರಲಿದೆ. ಎಲ್ಲ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಬಿಜೆಪಿ ಸತ್ತ ಪಕ್ಷ. ಜನರು ಕಷ್ಟ ಕೇಳುತ್ತಿಲ್ಲ. ದೇಶ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಮಾಜ ಜಾತಿ, ಧರ್ಮದ ಆಧಾರದಲ್ಲಿ ತುಂಡು ತುಂಡಾಗಿದೆ. ಅದನ್ನು ಜೋಡಿಸಲು ಯಾತ್ರೆ ಆರಂಭಿಸಿದ್ದೇವೆ. ಜನರಿಂದ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ಇದರಿಂದ ಬಿಜೆಪಿಯವರಿಗೆ ನಡುಕ ಶುರುವಾಗಿದೆ. ವಿಚಲಿತರಾಗಿ ಬಾಯಿಗೆ ಬಂದಂತೆ ನಮ್ಮ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಸಿ.ಟಿ.ರವಿಯವರು ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಇವರಿಂದ ಹೇಳಿಸಿಕೊಳ್ಳುವಷ್ಟು ಸಣ್ಣ ರಾಜಕಾರಣಿ ಅವರಲ್ಲ. ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಗುಡುಗಿದರು. ಶಾಸಕ ರಾಘವೇಂದ್ರ ಹಿಟ್ನಾಳ್, ಮುಖಂಡರಾದ ಕೃಷ್ಣಾ ಇಟ್ಟಂಗಿ, ತೋಟಪ್ಪ ಕಮನೂರು, ವಕ್ತಾರ ರವಿ ಕುರುಗೋಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net