ಕಾಳೇನಹಳ್ಳಿಯಲ್ಲಿ ಜೋಡಿ ತೆಪ್ಪೋತ್ಸವ

14ark-5
Published on

ಅರಕಲಗೂಡು: ಇತಿಹಾಸ ಪ್ರಸಿದ್ಧ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಶನಿವಾರ ಗೌರಮ್ಮ ಮೂರ್ತಿಯನ್ನು ದೊಡ್ಡಕೆರೆಯಲ್ಲಿ ತೆಪ್ಪೋತ್ಸವ ನಡೆಸಿ ವಿಸರ್ಜಿಸಲಾಯಿತು.


ಗೌರಿ ಹಬ್ಬದಂದು ಊರಿನ ಗೌರಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗೌರಮ್ಮ ಮೂರ್ತಿಗೆ ಒಂದು ತಿಂಗಳ ಕಾಲ ವಿಶೇಷ ಪೂಜಾ ಕೈಂಕರ್ಯ ನಡೆಸಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರಲ್ಲದೆ ಬೇರೆ ಊರುಗಳಿಂದಲೂ ಅಪಾರ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

ಶನಿವಾರ ಬೆಳಗ್ಗೆ ಗೌರಮ್ಮ ಮೂರ್ತಿಯನ್ನು ಉತ್ಸವ ಅಡ್ಡೆ ಮೇಲೆ ಹೊತ್ತು ಭಕ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದರು. ಗ್ರಾಮಸ್ಥರು ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ಬಳಿಕ ದೊಡ್ಡಕೆರೆಗೆ ಕೊಂಡೊಯ್ದು ತೆಪ್ಪದಲ್ಲಿ ಇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗೌರಮ್ಮ ಮೂರ್ತಿಯ ಜತೆಗೆ ಮತ್ತೊಂದು ತೆಪ್ಪದಲ್ಲಿ ಅಲಂಕೃತ ಗಿಡ್ಡಮ್ಮ ದೇವಿಯ ಉತ್ಸವ ಮೂರ್ತಿಯನ್ನು ಕೂರಿಸಿ ಜೋಡಿ ತೆಪ್ಪೋತ್ಸವ ನಡೆಸಲಾಯಿತು.

ಅಪಾರ ಭಕ್ತರು ಈ ದೃಶ್ಯ ಕಣ್ತುಂಬಿಕೊಂಡರು. ಬಳಿಕ ಭಕ್ತರ ಜಯಘೋಷಗಳ ನಡುವೆ ಗೌರಮ್ಮ ಮೂರ್ತಿಯನ್ನು ವಿಸರ್ಜಿಸಲಾಯಿತು. ಭಕ್ತರನ್ನು ಅನ್ನ ಸಂತರ್ಪಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net