

ನಾಗಮಂಗಲ: ತಾಲೂಕಿನ ಪುರಾಣ ಪ್ರಸಿದ್ಧ ಕೋಟೆಬೆಟ್ಟ ಗ್ರಾಮದ ಶ್ರೀ ಕಂಬದ ನರಸಿಂಹಸ್ವಾಮಿ ಬೆಟ್ಟದಲ್ಲಿನ ದೇವಾಲಯದ ಮುಂಭಾಗ ಮತ್ತು ನೂರೈವತ್ತು ಮೆಟ್ಟಿಲುಗಳ ತಟದ ಬೆಟ್ಟದ ಮೇಲೆ ನಿರ್ಮಿಸಿರುವ ಜೋಡಿ ಮಹಾರಾಜ ಗೋಪುರಗಳನ್ನು ಶುಕ್ರವಾರ ಲೋಕಾರ್ಪಣೆ ಗೊಳಿಸಲಾಯಿತು.
ಗುರುವಾರ ಬೆಳಗ್ಗೆ 10 ಗಂಟೆಗೆ ಧರ್ಮಧ್ವಜ ಸ್ಥಾಪನೆ ಮತ್ತು ಗಣಹೋಮದೊಂದಿಗೆ ಆರಂಭವಾದ ಪೂಜಾ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ 10 ಗಂಟೆವರೆಗೂ ನಡೆಯಿತು. ಪೂರ್ಣಾಹುತಿಯೊಂದಿಗೆ ತೆರೆಕಂಡ ಹೋಮದ ನಂತರ ಮೂಲ ದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರು ಶಾಖಾಮಠದ ಶ್ರೀ ಸೋಮನಾಥ ಸ್ವಾಮೀಜಿ ಗೋಪುರಗಳ ಕಳಶಗಳಿಗೆ ಪೂರ್ಣ ಕುಂಭಾಭಿಷೇಕ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ ಮೆಟ್ಟಿಲುಗಳು ಮತ್ತು ಅದರ ಛಾವಣಿಯನ್ನು ಉದ್ಘಾಟಿಸಿದರು.
ಪಡುವಗೆರೆಯ ಚನ್ನಕೇಶವ ವೇದಗುರುಕುಲದ ಸಂಸ್ಥಾಪಕ ಡಾ.ನಾರಾಯಣ ಆಚಾರ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನೆರವೇರಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇವಾಲಯ ಹಾಗೂ ಬೆಟ್ಟದ ಮಾರ್ಗವನ್ನು ತಳಿರು-ತೋರಣ ಮತ್ತು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು. ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ್‌ನಾರಯಣಗೌಡ ದೇವೆ ದರ್ಶನ ಪಡೆದರು. ಕಂಬದ ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ತಟ್ಟಹಳ್ಳಿ ನರಸಿಂಹಮೂರ್ತಿ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.