

ಮರಿಯಮ್ಮನಹಳ್ಳಿ: ಪಟ್ಟಣದ ಆರಾಧ್ಯ ದೈವಗಳಾದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿಗಳ ಜೋಡಿ ರಥೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು. ರಥೋತ್ಸವ ಅಂಗವಾಗಿ ರಥಾಂಗಹೋಮ ನಡೆಯಿತು.
ಇದನ್ನು ಓದಿ: ವಿಜೃಂಭಣೆಯಿಂದ ನಡೆದ ಅಂದಗಾರು ರಥೋತ್ಸವ
ನಂತರ ಪಲ್ಲಕ್ಕಿಯಲ್ಲಿ ಉಭಯಸ್ವಾಮಿಗಳ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಸ್ಥಾನದ ಪ್ರಾಂಗಣವನ್ನು ಹೂಗಳಿಂದ, ಮುಖ್ಯಬೀದಿಗಳನ್ನು ವಿದ್ಯತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಧಾರ್ಮಿಕ ವಿಧಿ-ವಿಧಾನಗಳನ್ನು ಕಿನ್ನಾಳದ ಗಂಗೂರ ಮನೆತನದವರು ನಡೆಸಿದರು. ನಂತರ ಸಾವಿರಾರು ಭಕ್ತರು ಉಭಯ ರಥಗಳನ್ನು ಎಳೆದು ಪುನೀತರಾದರು. ಈ ಜೋಡುರಥಗಳಿಗೆ ಈ ಬಾರಿ ಕೊನೆಯ ರಥೋತ್ಸವವಾಗಿದ್ದು ಮುಂದಿನ ವರ್ಷ ಹೊಸ ರಥಗಳನ್ನು ಎಳೆಯಲಾಗುವುದು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.