ಮಸ್ಕಿ ಉಪ ಚುನಾವಣಾ ಪ್ರಚಾರದಲ್ಲೂ ಜೋಡೆತ್ತುಗಳು!; ಮಂಡ್ಯವನ್ನು ನೆನಪಿಸಿದ ಚುನಾವಣಾ ಕಣ...

Untitled
Published on

ಮಸ್ಕಿ: ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಹಿನ್ನೆಲೆಯಲ್ಲಿ ಪ್ರಚಾರಾರ್ಥ ನಡೆಯುತ್ತಿರುವ ಬಹಿರಂಗ ಸಮಾವೇಶ ಭಾರಿ ಕಳೆಗಟ್ಟಿದ್ದು, ಜತೆಜತೆಗೆ ಅದು ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭವನ್ನೂ ನೆನಪಿಸಿಕೊಳ್ಳುವಂತೆ ಮಾಡಿದೆ. ಅದಕ್ಕೆ ಕಾರಣ ಜೋಡೆತ್ತುಗಳು!

2019ರಲ್ಲಿ ನಡೆದ ಮಂಡ್ಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೇಳಿ ಬಂದಿದ್ದ ಜೋಡೆತ್ತುಗಳು ಪದ ಇದೀಗ ಮಸ್ಕಿ ಉಪ ಚುನಾವಣಾ ಸಮರದಲ್ಲೂ ಪ್ರಸ್ತಾಪವಾಗಿದ್ದು, ಚುನಾವಣಾ ಪ್ರಚಾರದ ಕಿಕ್ಕೇರಿಸಿದೆ. ಸಚಿವ ಕೆ.ಎಸ್​. ಈಶ್ವರಪ್ಪ ಅವರು ಇಂದು ಬಹಿರಂಗ ಸಮಾವೇಶದಲ್ಲಿ ಜೋಡೆತ್ತುಗಳ ಪ್ರಸ್ತಾಪ ಮಾಡಿದ್ದಾರೆ.

ಚುನಾವಣೆ ಹಿನ್ನೆಲೆಯ್ಲಲಿ ಮಸ್ಕಿಯ ಪೊಲೀಸ್ ಮೈದಾನದಲ್ಲಿ ಬೃಹತ್​ ಸಮಾವೇಶ ಆಯೋಜಿಸಲಾಗಿದ್ದು, ಸಮಾವೇಶಕ್ಕೂ ಮುನ್ನ ಬಿಜೆಪಿ ಕಚೇರಿಯಿಂದ ಮೈದಾನದವರೆಗೂ ತೆರೆದ ವಾಹನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಹಲವಾರು ನಾಯಕರು ಮೆರವಣಿಗೆ ನಡೆಸಿದ್ದಾರೆ. ಬಳಿಕ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಈಶ್ವರಪ್ಪ ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಜೋಡಿ ಎತ್ತುಗಳು. ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಂತೆ ಪಕ್ಷವನ್ನು ಸಂಘಟಿಸಿದ್ದಾರೆ. ಈ ಕ್ಷೇತ್ರದಲ್ಲಿ ಪ್ರತಾಪ್ ಗೌಡ ಪಾಟೀಲರು ಬಿಜೆಪಿಯಿಂದ ಗೆದ್ದು ಮಂತ್ರಿಯಾಗುವ ಅವಕಾಶ ಜಾಸ್ತಿ ಇದೆ ಎಂದು ಈಶ್ವರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net