

ಬಸವನಬಾಗೇವಾಡಿ: ಎತ್ತುಗಳ ಸಂತತಿ ಉಳಿದಾಗಲೇ ಮಾನವನ ಅಭಿವೃದ್ಧಿಯಾಗಿ ಮುಂದಿನ ಪೀಳಿಗಿಗೆ ಅನ್ನ ದೊರೆಯಲಿದೆ ಎಂದು ರೈತ ಸಿದ್ರಾಮಪ್ಪ ಬಾಗೇವಾಡಿ ಹೇಳಿದರು.
ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಈಚೆಗೆ ನಡೆದ ಎತ್ತುಗಳ ಮಹತ್ವದ ಕುರಿತ ರಚಿಸಿದ "ಬಸವ ರಾಜಕೀಯ' ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿ, ಆಧುನಿಕತೆ ಭರಾಟೆಯಲ್ಲಿ ಇಂದಿನ ಸಮಾಜ ಜೋಡೆತ್ತು ಮತ್ತು ಕೃಷಿಯ ಮಹತ್ವ ಅರಿಯದೇ ಸಾಗುತ್ತಿದೆ.
ಜೋಡೆತ್ತುಗಳ ಸಾಕಾಣಿಕೆ, ಮತ್ತದರ ಮಹತ್ವಗಳ ಕುರಿತು ಅರಿವು ಮೂಡಿಸಿ ಅವುಗಳ ಸಂರಕ್ಷಿಸುವ ಕಾರ್ಯ ಎಲ್ಲೆಡೆ ನಡೆಯಬೇಕಿದೆ ಎಂದರು.
ಪುಸ್ತಕದ ಲೇಖಕ ಬಸವರಾಜ ಬಿರಾದಾರ ಮಾತನಾಡಿ, ಎತ್ತುಗಳ ಮೂಲಕ ನಡೆಯುವ ಕೃಷಿ ಉಳಿದರೆ ಮಾತ್ರ ಬಯಲು ಸೀಮೆಯ ನಾಗರೀಕತೆಗಳು ಉಳಿಯಲು ಸಾಧ್ಯ.
ಎತ್ತು ಸಾಕಾಣಿಕೆದಾರರಿಗೆ ಸೂಕ್ತ ಪ್ರೋತ್ಸಾಹ ಸಿಗದೇ ಜೋಡೆತ್ತುಗಳ ಕೃಷಿಯು ಎಲ್ಲ ಗ್ರಾಮಗಳಲ್ಲಿ ನಶಿಸಿ ಹೋಗುತ್ತಿದೆ ಇದು ಆತಂಕಕಾರಿ ಬೆಳವಣಿಗೆ. ಸರ್ಕಾರ ಜೋಡೆತ್ತಿನ ಕೃಷಿಕರಿಗೆ ವಿಶೇಷ ಯೋಜನೆ ಜಾರಿಗೆ ತರುವಂತೆ ಅವರು ಒತ್ತಾಯಿಸಿದರು.
ಮಲ್ಲಪ್ಪ ಬಾಗೇವಾಡಿ, ಸಿದ್ದಪ್ಪ ಪತ್ತಾರ, ಪ್ರಶಾಂತ ಬಾಗೇವಾಡಿ, ಸಿದ್ಧೇಶ ಅವಟಿ, ಸಿದ್ದಲಿಂಗಪ್ಪ ನಂದಿ, ಚಂದ್ರಶೇಖರ ಬಾಗೇವಾಡಿ, ಚಂದ್ರಶೇಖರ ನಂದಿ, ಮಲ್ಲಪ್ಪ ಬೋಕಿ ಮತ್ತಿತರರಿದ್ದರು.