

ಕಮಲಾಪುರ: ದೇಶದ ಬೆನ್ನೆಲುಬಾದ ರೈತರಿಗೆ ಸಕಾಲಕ್ಕೆ ಅಗತ್ಯ ತರಬೇತಿ, ಪ್ರೋತ್ಸಾಹ ಹಾಗೂ ಸಹಕಾರ ನೀಡುತ್ತಿರುವ ಧಾರ್ಮಿಕ ಕೇಂದ್ರಗಳಲ್ಲಿ ಬಬಲಾದ್ ಮಠವೂ ಒಂದಾಗಿದೆ. ಅನ್ನದಾತರ ಸಮಗ್ರ ಅಭಿವೃದ್ಧಿಗಾಗಿ ಶ್ರೀಮಠ ಶ್ರಮಿಸುತ್ತಿದೆ ಎಂದು ಹಿರನಾಗಾಂವ್‌ದ ಶ್ರೀ ಜಯಶಾಂತಲಿಂಗ ಸ್ವಾಮೀಜಿ ನುಡಿದರು.
ಮುತ್ತ್ಯಾನ ಬಬಲಾದನಲ್ಲಿ ಶ್ರೀ ಸಿದ್ಧಬಸವೇಶ್ವರ ೬೯ನೇ ಜಾತ್ರೋತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿ, ಬಬಲಾದನ ಲಿಂ.ಶ್ರೀ ಗುರುಚನ್ನವೀರ ಶಿವಯೋಗಿಗಳು, ಶ್ರೀ ಗುರುಪಾದಲಿಂಗ ಶಿವಯೋಗಿಗಳು ತಮ್ಮ ಬದುಕಿನಲ್ಲಿ ಕೃಷಿಯನ್ನು ಉಸಿರಾಗಿಸಿಕೊಂಡು ಈ ಭಾಗದ ರೈತರಿಗೆ ಮಾದರಿಯಾಗಿದ್ದಾರೆ. ಗುಡ್ಡದಲ್ಲಿ ಕೃಷಿ ನಡೆಸಿ ಅತ್ಯಧಿಕ ಇಳುವರಿ ಪಡೆದು ಸಾಧಿಸಿದ್ದಾರೆ ಎಂದು ಬಣ್ಣಿಸಿದರು.
ಬಬಲಾದನ ಶ್ರೀ ಗುರುಪಾದಲಿಂಗ ಶಿವಯೋಗಿಗಳು, ಮುಕ್ತಂಪುರದ ಶ್ರೀ ಶಿವಾನಂದ ಶಿವಯೋಗಿಗಳು, ಹರಸೂರದ ಶ್ರೀ ಸಿದ್ಧರಾಮ ಶಿವಾಚಾರ್ಯರು, ಕೋಹಿನೂರಿನ ಶ್ರೀ ಬಿಸ್ಮಿಲ್ಲಾ ಶಹಾ, ಸಂಸದ ಡಾ.ಉಮೇಶ ಜಾಧವ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಬಸ್ಸಪ್ಪ ಪಾಟೀಲ್ ಅಷ್ಟಗಿ, ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್, ಪ್ರಮುಖರಾದ ಗಂಗಮ್ಮ ಮುನ್ನಳ್ಳಿ, ಶರಣಬಸ್ಸಪ್ಪ ವಡ್ಡನಕೇರಿ, ಕಲ್ಯಾಣರಾವ ಬಿರಾದಾರ, ಶರಣಬಸ್ಸಪ್ಪ ಮುಡಬಿ ಇತರರಿದ್ದರು. ಅಂಬಾರಾಯ ಮಡ್ಡೆ ನಿರೂಪಣೆ ಮಾಡಿದರು.