ಕೆಲಸ ಕೊಡಿಸದಿದ್ರೆ ಸಾಯ್ತೀನಿ ಎಂದ ಮಹಿಳೆ: ಆತ್ಮಹತ್ಯೆ ಬೆದರಿಕೆಗೆ ಜಿಲ್ಲಾಧಿಕಾರಿ ಗರಂ

dvg janaspandana feb 3
Published on

ದಾವಣಗೆರೆ: ನನಗೆ ಕೆಲಸ ಕೊಡಿಸಿ.,ದಾವಣಗೆರೆ ವಿವಿಯಲ್ಲೇ ಕೊಡಿಸಿ., ಇಲ್ದಿದ್ರೆ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಬೆದರಿಸಿದ ಮಹಿಳೆಯ ವಿರುದ್ಧ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೋಮವಾರ ಗರಂ ಆದರು.

ಆತ್ಮಹತ್ಯೆ ಮಾಡಿಕೋಳ್ತಿನಿ ಎಂದು ಹೇಳುವವರಿಗೆ ಪಾಠವಾಗಲಿ ಈ ಮಹಿಳೆ ವಿರುದ್ಧ ದೂರು ದಾಖಲಿಸಿ ಎಂದು ಪೊಲೀಸರಿಗೆ ಸೂಚಿಸಿದರು. ಬಳಿಕ ಯಾವುದೇ ದೂರು ದಾಖಲಿಸಲಿಲ್ಲ. ಪೊಲೀಸರು ಕೂಡ ಮಹಿಳೆಗೆ ತಿಳಿವಳಿಕೆ ನೀಡಿ ಮನೆಗೆ ಕಳುಹಿಸಿದರು.

ಇದೆಲ್ಲ ನಡೆದಿದ್ದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜನಸ್ಪಂದನ ಸಭೆಯಲ್ಲಿ.

ತನ್ನ ಇಬ್ಬರು ಮಕ್ಕಳೊಂದಿಗೆ ಜಿಲ್ಲಾಧಿಕಾರಿಗೆ ಅಹವಾಲು ಸಲ್ಲಿಸಲು ಬಂದಿದ್ದ ಮಹಿಳೆ ತಾನು ಎದುರಿಸುತ್ತಿರುವ ಸಂಕಷ್ಟವನ್ನು ತೋಡಿಕೊಂಡು ಕೆಲಸ ಕೊಡಿಸುವಂತೆ ಮನವಿ ಮಾಡಿದಳು. ವಿಶ್ವವಿದ್ಯಾಲಯದಲ್ಲಿ ಕೆಲಸ ಕೊಡಿಸುವಂತೆ ಕೇಳಿಕೊಂಡಳು.

ಪ್ರತಿ ಸಭೆಯಲ್ಲೂ ಕೆಲಸ ಕೇಳಿಕೊಂಡು ಜನ ಬರುತ್ತಾರೆ, ಎಲ್ಲರಿಗೂ ಉದ್ಯೋಗ ನೀಡಲು ಹೇಗೆ ಸಾಧ್ಯ, ಎಲ್ಲಾದರೂ ದುಡಿದು ಜೀವನ ಸಾಗಿಸಬೇಕು ಎಂದು ಡಿಸಿ ಸಲಹೆ ನೀಡಿದರು.

ಆಗ ಆ ಮಹಿಳೆ, ಕೆಲಸ ಸಿಗದಿದ್ದರೆ ಇಲ್ಲಿಯೇ ಸಾಯುವುದಾಗಿ ಹೇಳಿದಾಗ ಜಿಲ್ಲಾಧಿಕಾರಿಯ ಸಹನೆಯ ಕಟ್ಟೆಯೊಡೆಯಿತು. ಈಕೆಯನ್ನು ಕರೆದುಕೊಂಡು ಪೊಲೀಸರಿಗೆ ಒಪ್ಪಿಸಿ ಪ್ರಕರಣ ದಾಖಲಿಸಿ. ಎಸ್ಪಿ ಅವರಿಗೆ ವಿಚಾರ ತಿಳಿಸಿ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಜೀಪ್ ತರಿಸಿ ಎಂದು ಡಿಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net