

ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಚಾಲಕ/ನಿರ್ವಾಹಕ ಹುದ್ದೆಗಳ ಪೈಕಿ ಸಾವಿರ ಜನರನ್ನು ಭರ್ತಿ ಮಾಡಿರುವುದು ಬಹಳಷ್ಟು ಅಭ್ಯರ್ಥಿಗಳ ನಿದ್ದೆಗೆಡಿಸಿದೆ. ಉಳಿಕೆ ಹುದ್ದೆಗಳನ್ನೂ ಭರ್ತಿ ಮಾಡುವಂತೆ ಆಗ್ರಹಿಸಿ ನೂರಾರು ಉದ್ಯೋಗಾಕಾಂಕ್ಷಿಗಳು ಇಲ್ಲಿಯ ವಾಕರಸಾ ಸಂಸ್ಥೆ ಕೇಂದ್ರ ಕಚೇರಿ ಮುಂದೆ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ಧಾರೂಢ ಮಠದಲ್ಲಿ ಜಮಾಯಿಸಿದ ನೊಂದ ಅಭ್ಯರ್ಥಿಗಳು ಸಂಸ್ಥೆಯ ವಿರುದ್ಧ ಪ್ರತಿಭಟಿಸಲು ಸಜ್ಜಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಸಮಾಧಾನಪಡಿಸಿದರು. ಆದರೂ ಕಿವಿಗೊಡದ ಅಭ್ಯರ್ಥಿಗಳು ನೇರವಾಗಿ ಕೇಂದ್ರ ಕಚೇರಿಗೆ ಆಗಮಿಸಿ ಉಳಿದ ಖಾಲಿ ಹುದ್ದೆಗಳನ್ನೂ ಭರ್ತಿ ಮಾಡುವಂತೆ ಪಟ್ಟು ಹಿಡಿದರು.
ಆಗ ಸ್ಥಳಕ್ಕೆ ಆಗಮಿಸಿದ ಡಿಸಿಪಿ ಮಹಾನಿಂಗ ನಂದಗಾಂವಿ, ಮೊದಲು ಏನಾಗಿದೆ ಎಂಬುದರ ಮಾಹಿತಿ ಕೊಡಿ. ಈ ಕುರಿತು ಚರ್ಚಿಸಿ ಅಂತಿಮ ತೀರ್ಮಾನವನ್ನು ಸಂಸ್ಥೆಯು ತೆಗೆದುಕೊಳ್ಳಲಿದೆ ಎಂದು ಸಮಾಧಾನಿಸಿದರು. ಆದರೂ ಆಕ್ರೋಶ ತಣ್ಣಗಾಗಲಿಲ್ಲ.
ಸಭೆ: ವಾಕರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ಹಂಪಿ ಕನ್ನಡ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಸುಭಾಷಸಿಂಗ್ ಜಮಾದಾರ ಅವರು ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ, ಇದ್ದ ಖಾಲಿ ಹುದ್ದೆ ಭರ್ತಿ ಸೇರಿ ಕೆಲವೊಂದಿಷ್ಟು ಬೇಡಿಕೆ ಮುಂದಿಟ್ಟರು. ಇವೆಲ್ಲವನ್ನೂ ಆಲಿಸಿದ ಪ್ರಿಯಾಂಗಾ, ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ಕೊನೆಗೆ ಜೂ. 10ರಂದು ಬೆಳಗ್ಗೆ 11.30ಕ್ಕೆ ಕೆಲ ಬೇಡಿಕೆಯುಳ್ಳ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.