

ಚಿತ್ರದುರ್ಗ: ದಂತ ವೈದ್ಯಕೀಯ ಕ್ಷೇತ್ರದಲ್ಲೂ ಉದ್ಯೋಗಾವಕಾಶಗಳು ಅಧಿಕವಾಗಿವೆ ಎಂದು ಬೆಂಗಳೂರು ಸರ್ಕಾರಿ ದಂತ ಮಹಾವಿದ್ಯಾಲಯದ ಪ್ರಾಂಶು ಪಾಲ ಡಾ.ಗಿರೀಶ್ ಗಿರಡ್ಡಿ ಹೇಳಿದರು.
ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ನಗರದ ಎಸ್‌ಜೆಎಂ ದಂತ ಮಹಾವಿದ್ಯಾಲಯದ 32ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ,ದಂತ ವೈದ್ಯಕೀಯ ಪದವಿ ಪಡೆದಿರುವ ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಶಿಕ್ಷಣಕ್ಕೆ ಮುಂದಾಗ ಬಹುದು,ಈ ಕ್ಷೇತ್ರದಲ್ಲೂ ಸಾಕಷ್ಟು ಉದ್ಯೋಗಾವಕಾಶಗಳಿವೆ.
ಪದವೀಧರರಾದ ತಾವು ಐಎಎಸ್,ಐಪಿಎಸ್‌ನಂಥ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದು ಉನ್ನತ ಸರ್ಕಾರಿ ಹುದ್ದೆಗಳಿಗೆ ನೇಮಕವಾಗ ಬಹುದು. ನೀವು ಏನೇ ಮಾಡಿದರೂ ಅದರಿಂದ ಸಮಾಜಕ್ಕೆ ಒಳಿತಾಗಬೇಕು. ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಬೇಕು. ನೀವು ಸಮಾಜಕ್ಕೆ ಉತ್ತ ಮ ಸೇವೆಯನ್ನು ನೀಡಬೇಕು.
ವಿದ್ಯಾರ್ಥಿಗಳು ಭವಿಷ್ಯದ ಭಾರತಕ್ಕೆ ಮಾದರಿಯಾಗಬೇಕೆಂದರು. ಶ್ರೀಮಠದ ಆಡಳಿತಾಧಿಕಾರಿ ಪಿ.ಎಸ್. ವಸ್ತ್ರದ ಮಾತನಾಡಿ,ದಂತ ವೈದ್ಯಕೀಯ ವಿಭಾಗದಲ್ಲಿ ಸಾಕಷ್ಟು ಅವಕಾಶಗಳಿವೆ.ಪ್ರಪಂಚದಲ್ಲಿ ಔಷಧೀಯ ವಿಜ್ಞಾನ,ದಂತ ವೈದ್ಯಕೀಯ ಕ್ಷೇತ್ರ ಗಳು ಹೆಚ್ಚು ಪ್ರಾಮುಖ್ಯತೆ ಪಡೆದಿವೆ ಎಂದರು. ಪ್ರಾಚಾರ‌್ಯೆ ಡಾ.ಆರ್.ಗೌರಮ್ಮ ಸ್ವಾಗತಿಸಿದರು.
55 ಬಿಡಿಎಸ್.ಪದವೀಧರರು ಹಾಗೂ ದಂತಕುಳಿ ವಿಭಾಗದಿಂದ ಇಬ್ಬರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ಪಡೆದರು. ಶ್ರೀಮಠದ ಕಾರ‌್ಯದರ್ಶಿ ಕೆ.ವಿ.ಪ್ರಭಾಕರ,ಡಾ.ರಘುನಾಥರೆಡ್ಡಿ,ಡಾ.ನಾಗರಾಜಪ್ಪ,ಧರಂ ಹಿಂದೂಜ,ಡಾ.ಹರೀಶ್,ಡಾ.ಕೇಶವರೆಡ್ಡಿ,ಡಾ.ಹರಿಣಿ, ಡಾ.ಜಯಚಂದ್ರ ಮತ್ತಿತರರು ಇದ್ದರು.