

ಮಂಡ್ಯ: ಜಿಲ್ಲೆಯಲ್ಲಿ ಯುವ ನಿಧಿ ವ್ಯಾಪ್ತಿಗೆ ಒಳಪಡುವ 60 ಪದವಿ, ಪಾಲಿಟೆಕ್ನಿಕ್ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ. 2025ನೇ ಸಾಲಿನಲ್ಲಿ ತೇರ್ಗಡೆಗೊಂಡು ಹೊರ ಹೋಗಿರುವ ವಿದ್ಯಾರ್ಥಿಗಳಿಗೆ 180 ದಿನ ಕಳೆದರೂ ಉದ್ಯೋಗ ಸಿಗದಿದ್ದರೆ ಅವರಿಗೆ ಯುವ ನಿಧಿ ಕೊಡಿಸುವ ಜವಾಬ್ದಾರಿಯನ್ನು ಆ ಕಾಲೇಜಿನ ಪ್ರಾಂಶುಪಾಲರು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಉದ್ಯೋಗ ಸೇವೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಯಲಯ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮಾರುಕಟ್ಟೆ ಮಾಹಿತಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉದ್ಯೋಗ ಅರಸಿ ಬರುತ್ತಿರುವ ಯುವ ಸಮೂಹ ನಿರಾಸೆಯಿಂದ ಕೈಚಲ್ಲಿ ಕೂರಬಾರದು ಎಂಬ ಉದ್ದೇಶದಿಂದ ಯುವ ನಿಧಿ ಜಾರಿಗೊಳಿಸಲಾಗಿದೆ. ಯೋಜನೆ ಬಳಸಿಕೊಂಡು ಯುವ ಜನತೆ ಆಸಕ್ತಿ ಇರುವ ವಿಷಯಗಳಲ್ಲಿ ಯುವ ನಿಧಿ ಪ್ಲಾಸ್ ಮುಖಾಂತರ ಕೌಶಲ ತರಬೇತಿ ಪಡೆಯಬೇಕು ಎಂದು ತಿಳಿ ಹೇಳಿದರು.
ಉತ್ತೀರ್ಣರಾಗಿ ಕಾಲೇಜಿನಿಂದ ಹೊರಹೋಗುವ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಮಾಹಿತಿ ನೀಡಬೇಕು. ವಿದ್ಯಾರ್ಥಿಗಳಿಗೆ ಸರ್ಕಾರದಲ್ಲಿ ಲಭ್ಯವಿರುವ ಅನೇಕ ಕೌಶಲ ತರಬೇತಿಗಳ ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಪ್ರಾಂಶುಪಾಲರುಗಳು ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ವಿಷಯಗಳ ಕುರಿತು ಅವರಿಗೆ ಸರ್ಕಾರದ ವತಿಯಿಂದ ಲಭ್ಯವಿರುವ ಕೌಶಲ ತರಬೇತಿಗಳ ಕುರಿತಾಗಿ ಹೆಚ್ಚಿನ ಮಾಹಿತಿ ನೀಡಬೇಕು. ಯುವ ಜನತೆ ನಮ್ಮ ದೇಶದ ಸಂಪತ್ತು, ಯುವ ಜನತೆಗೆ ಸಕಾಲದಲ್ಲಿ ಪ್ರೋತ್ಸಾಹ ಮತ್ತು ಉತ್ತೇಜನ ನೀಡಲು ಯುವನಿಧಿ ಸಹಕಾರಿಯಾಗಿದೆ ಎಂದರು.
ಸರ್ಕಾರ ಯಾವುದೇ ಯೋಜನೆ ತಂದರೂ ಅದನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರುವುದು ಅಧಿಕಾರಿಗಳ ಇಚ್ಛಾಶಕ್ತಿಯ ಮೇಲೆ ನಿಂತಿದೆ. ನಮ್ಮ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಅರ್ಹ ಎಲ್ಲ ಸಾರ್ವಜನಿಕರಿಗೆ ತಲುಪಿಸಲು ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಅಧ್ಯಕ್ಷರು ಹಾಗೂ ಸದಸ್ಯರು ಯೋಜನೆಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ಕೆ.ಡಿ.ಪಿ ಸಭೆಗೆ ಆಗಮಿಸಿ ಮಾತನಾಡಿದ್ದ ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ ರೇವಣ್ಣ ಅವರು ಗ್ಯಾರಂಟಿ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ನಮಗೆ ಕೆಲವು ಮಾರ್ಗದರ್ಶನ ನೀಡಿದ್ದಾರೆ ಹಾಗೂ ಯುವನಿಧಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕಡ್ಡಾಯವಾಗಿ ಕಾಲೇಜುಗಳಿಗೆ ತೆರಳಿ ಯುವನಿಧಿ ಯೋಜನೆ ಕುರಿತಾಗಿ ಹೆಚ್ಚಿನ ಪ್ರಚಾರ ಹಾಗೂ ಅರಿವು ಮೂಡಿಸಿ ಎಂದು ಸೂಚನೆ ನೀಡಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಸಾರ್ವಜನಿಕ ವಲಯಗಳಲ್ಲಿ ಕೆಲಸ ಪಡೆಯಲು ಕೌಶಲ ಅಭಿವೃದ್ಧಿ ಅತಿ ಮುಖ್ಯ. ಆದರೆ ಯುವ ಜನತೆಗೆ ಕೌಶಲದ ಕೊರತೆಯಿಂದಾಗಿ ಉದ್ಯೋಗ ದೊರೆಯುತ್ತಿಲ್ಲ. ಜಿಲ್ಲೆಯ ಯುವ ಜನತೆಗೆ ಕೌಶಲದ ಅಭಿವೃದ್ಧಿ ಅಗತ್ಯವಿದೆ. ಕಾಲೇಜುಗಳು ಖಾಸಗಿ ವಲಯಗಳಲ್ಲಿರುವ ಸಂಸ್ಥೆಗಳೊಡನೆ ನೇರ ಸಂಪರ್ಕ ಸಾಧಿಸಬೇಕು. ಕಾಲೇಜಿನಲ್ಲಿರುವ ಪ್ಲೇಸ್‌ಮೆಂಟ್ ಸೆಲ್ ಗಳನ್ನು ಬಲವರ್ಧನೆಗೊಳಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ 6,856 ಜನ ನಿರುದ್ಯೋಗಿಗಳು ಎಂದು ನೋಂದಣಿ ಮಾಡಿಕೊಂಡಿದ್ದಾರೆ. 5,942 ಜನರು ಯುವ ನಿಧಿಗೆ ಅರ್ಹರೆಂದು ಗುರುತಿಸಲಾಗಿದೆ. ಈವರೆಗೆ ಫಲಾನುಭವಿಗಳ ಖಾತೆಗೆ ಡಿ.ಬಿ.ಟಿ ಮೂಲಕ ನೇರವಾಗಿ 11.92 ಕೋಟಿ ರೂ ಅನುದಾನವನ್ನು ಯುವ ನಿಧಿ ಯೋಜನೆಯಡಿ ಮಂಜೂರು ಮಾಡಲಾಗಿದೆ. ನೀಡಲಾಗಿರುವ ಹಣವನ್ನು ಬಳಸಿಕೊಂಡು ಉದ್ಯಮ ಆರಂಭಿಸಿದರೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು. ಯುವ ಸಮೂಹ ಉದ್ಯೋಗ ಮತ್ತು ಕೌಶಲವನ್ನು ಹೊರ ಜಿಲ್ಲೆ ಅಥವಾ ರಾಜ್ಯದಲ್ಲಿ ಪಡೆದುಕೊಂಡು ಜೀವನ ರೂಪಿಸಿಕೊಳ್ಳಲು ಸಿದ್ಧರಿರಬೇಕು. ಎಲ್ಲವನ್ನೂ ಸ್ವತಃ ಊರಿನಲ್ಲೆ ಮಾಡುತ್ತೇನೆ ಎಂದು ಕೂರಬಾರದು. ಯುವ ನಿಧಿ ಮತ್ತು ಯುವ ನಿಧಿ ಫ್ಲಸ್ ಯೋಜನೆಯ ಮೂಲ ಉದ್ದೇಶ ಕೌಶಲ ಅಭಿವೃದ್ಧಿ ಹಾಗೂ ಉದ್ಯೋಗ ಅವಕಾಶವನ್ನು ಹೆಚ್ಚಿಸುವುದು ಎಂದು ವಿವರಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ವಿದ್ಯಾರ್ಥಿಗಳು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದು ಪ್ರಾಂಶುಪಾಲರಿಗೆ ತಿಳಿದಿರುತ್ತದೆ. ಅದ್ದರಿಂದ ಉದ್ಯೋಗ ಮತ್ತು ಕೌಶಲ ಅಭಿವೃದ್ಧಿಯನ್ನು ಪಡೆಯಲು ಮಾರ್ಗದರ್ಶನ ನೀಡಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಉದ್ಯೋಗ ಪಡೆದು ಬದುಕಿನಲ್ಲಿ ಯಶಸ್ಸು ಕಾಣುತ್ತಾರೆ ಎಂದು ತಿಳಿಸಿದರು.
ಮಂಡ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರುದ್ರಪ್ಪ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಮಂಡ್ಯ ತಾಲೂಕಿನಲ್ಲಿಯೇ ಗೃಹಲಕ್ಷ್ಮೀ ಯೋಜನೆಯಡಿ 341 ಕೋಟಿ ರೂ ಅನುದಾನ ನೀಡಲಾಗಿದೆ. ಇದರಿಂದ ಮಹಿಳೆಯರು ಸಣ್ಣ ಸಣ್ಣ ಉದ್ಯಮ ಆರಂಭಿಸಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಪಂ ಯೋಜನಾಧಿಕಾರಿ ಧನುಷ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ನವೀನ್‌ಕುಮಾರ್, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ನಾಗನಂದ ಇತರರಿದ್ದರು.