

ಮಂಡ್ಯ: ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಉದ್ಯೋಗಗಳು ಸಿಗುವುದು ಕಷ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಗರದ ರೈತ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗ, ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಹಾಗೂ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಎಲ್ಲರೂ ಸಮಾಜದ ಚಿಂತಕರಾಗಬೇಕು. ರಾಜ್ಯದ ಅಭಿವೃದ್ಧಿ ಕಡೆ ಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಎಲ್ಲರೂ ಶಿಕ್ಷಣ ಪಡೆಯುತ್ತಾರೆ ಎಂದು ಹೇಳಿದರು.
ಅನೇಕ ಖಾಸಗಿ ಕಂಪನಿಗಳು ಉದ್ಯೋಗ ಕೊಡಲು ಮುಂದೆ ಬಂದಿದ್ದಾರೆ. ಇಂತಹ ಉದ್ಯೋಗ ಮೇಳಗಳು ಯುವ ಸಮೂಹಕ್ಕೆ ವರದಾನವಾಗಿವೆ. ಆದ್ದರಿಂದ ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಬಹಳ ವರ್ಷಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಕೊಡುವ ಮೂಲಕ ಆಡಳಿತ ಮಾಡಲು ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ಗ್ರಾಮೀಣ ವಿದ್ಯಾವಂತವರಿಗೆ ಉಚಿತವಾಗಿ ಉದ್ಯೋಗಗಳು ಉತ್ತಮ ಕಂಪನಿಗಳಲ್ಲಿ ಲಭ್ಯವಾಗಲಿ, ಆರ್ಥಿಕ ಮಟ್ಟದ ಸುಧಾರಣೆಗೆ ಉದ್ಯೋಗ, ಕೌಶಲಜ್ಞಾನ ವೃದ್ಧಿಯಾಗಲಿ ಎಂಬುವುದೇ ನಮ್ಮ ಧ್ಯೇಯವಾಗಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು. 20ಕ್ಕೂ ಹೆಚ್ಚು ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡು 500ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮುಖಂಡರಾದ ಹಾಲಳ್ಳಿ ರಾಮಲಿಂಗಯ್ಯ, ಚಿದಂಬರ್, ಶಿವರುದ್ರ, ಆಟೋಕೃಷ್ಣ, ಯೋಗೇಶ್, ನಾಗೇಶ್ ಇತರರಿದ್ದರು.