

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶ್ರೀ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಶ್ರೀಮತಿ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಕಲಾ ಹಾಗೂ ಡಾ. ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಕಾಲೇಜು ವತಿಯಿಂದ ನ. 9ರಂದು ಕಾಲೇಜು ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯೆ ಡಾ. ರಾಜೇಶ್ವರಿ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9 ಗಂಟೆಗೆ ಉದ್ಘಾಟನೆ ಸಮಾರಂಭ ನಡೆಯಲಿದ್ದು, 10.30ರಿಂದ ಸಂದರ್ಶನಗಳು ಆರಂಭವಾಗಲಿವೆ. ಮೇಳದಲ್ಲಿ 5 ಕಂಪನಿಗಳು ಭಾಗವಹಿಸಲಿವೆ. ಈಗಾಗಲೇ ಆನ್ಲೈನ್ ಮೂಲಕ ಸುಮಾರು 250 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದು, ಮೇಳದ ದಿನದಂದು ಸಹ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೋಮಾ ಸೇರಿ ಎಲ್ಲ ಹಂತದವರು ಭಾಗವಹಿಸಬಹುದು. ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗ ನೀಡುವವರಿಗೆ ಅನುಕೂಲತೆ, ಸಮಾಜದಲ್ಲಿ ಖಾಸಗಿ ಉದ್ಯೋಗಗಳ ಬಗ್ಗೆ ಜಾಗೃತಿ ಮೂಡಿಸುವುದು ಮೇಳದ ಉದ್ದೇಶವಾಗಿದೆ ಎಂದರು.
ಡಾ. ದತ್ತಾ ಕಾಮಕರ, ಎಸ್.ಕೆ. ಹೊಸಂಗಡಿ, ಮಾಲಾಶ್ರೀ ಮಲ್ಯಾಗೋಳ, ಉಮಾ ಭಗತ್ಸಿಂಗ್, ಇತರರು ಇದ್ದರು.