

ಮಂಡ್ಯ: ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಒದಗಿಸಿಕೊಡುವ ಉದ್ದೇಶದಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮ ರೂಪಿಸಿದ್ದಾರೆ. ಅದರಂತೆ ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಅ.18 ಮತ್ತು 19ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧತೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಎಚ್‌ಡಿಕೆ ಅವರ ಸೂಚನೆಯಂತೆ ಜಿಲ್ಲೆಯಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಈ ಮೇಳದಲ್ಲಿ 150ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿ ಭಾಗವಹಿಸಲಿವೆ. ಮುಖ್ಯವಾಗಿ ಮಂಡ್ಯ ಲೋಕಸಭಾ ಕ್ಷೇತ್ರವಷ್ಟೇ ಅಲ್ಲದೇ ಅಕ್ಕಪಕ್ಕದ ಲೋಕಸಭಾ ಕ್ಷೇತ್ರದ ಉದ್ಯೋಗಾಂಕ್ಷಿಗಳನ್ನು ಕರೆಸುವ ಯೋಜನೆ ರೂಪಿಸಿಕೊಂಡಿದ್ದೇವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಪದವಿ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಪದವಿಗಳನ್ನು ಪಡೆದ ಅರ್ಹ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದು ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ಚುನಾವಣೆ ಸಮಯದಲ್ಲಿ ಕ್ಷೇತ್ರ ಪ್ರವಾಸ ಮಾಡುವಾಗ ನಿರುದ್ಯೋಗ ಸಮಸ್ಯೆ ಗಮನಕ್ಕೆ ಬಂದಿತ್ತು. ಅದರಲ್ಲೂ ಕೇಂದ್ರ ಕೈಗಾರಿಕಾ ಮಂತ್ರಿಯಾದ ಮೇಲೂ ಸಹ ಯುವಕರ ನಿರುದ್ಯೋಗ ಸಮಸ್ಯೆ ಬಗ್ಗೆ ತೀವ್ರ ಚರ್ಚೆಯಾಯಿತು. ಇದನ್ನು ಹೋಗಲಾಡಿಸುವ ಸಲುವಾಗಿ ಚಿಂತನೆ ನಡೆಸಿದ್ದಾರೆ. ಅಂದು ಉದ್ಯೋಗ ಮೇಳಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಇಂತಹ ಮೇಳವನ್ನು ಯುವ ಸಮೂಹ ಸದ್ಭಳಕೆ ಮಾಡಿಕೊಳ್ಳಬೇಕು. ಇದೊಂದು ವಿಶೇಷವಾದ ಉದ್ಯೋಗ ಮೇಳ. ಮೊದಲು ನೋಂದಣಿ ಮಾಡಿಸುವುದು ಸೇರಿದಂತೆ ಅವರ ವಿದ್ಯಾರ್ಹತೆಗೆ ತಕ್ಕಂತೆ ತಮ್ಮ ಉದ್ಯೋಗ ಪಡೆದುಕೊಳ್ಳುವ ಅವಕಾಶವಿದೆ ಎಂದು ವಿವರಿಸಿದರು.
ಜೆಡಿಎಸ್ ಎಸ್ಸಿ ವಿಭಾಗದ ರಾಜ್ಯಾಧ್ಯಕ್ಷ ಡಾ.ಕೆ.ಅನ್ನದಾನಿ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಆರ್‌ಎಪಿಸಿಎಂಎಸ್ ನಿರ್ದೇಶಕ ಬೇಲೂರು ಸೋಮಶೇಖರ್, ಉದ್ಯೋಗ ಮೇಳದ ಸಿದ್ದತಾ ಅಧಿಕಾರಿ ಪವನ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್ ಇತರರಿದ್ದರು.
2 ಸಾವಿರ ಉದ್ಯೋಗದ ನಿರೀಕ್ಷೆ
ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಈ ಬಾರಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಮೇಳ ನಡೆಸಲಾಗುತ್ತಿದೆ. ದೇಶಾದ್ಯಂತ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ. ಕೇಡರ್ ಪದ್ಧತಿಯಲ್ಲಿ ಉದ್ಯೋಗ ಸಿಗಲಿದೆ. 2000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗುವ ವಿಶ್ವಾಸವಿದೆ ಎಂದರು.
ಜನಪ್ರತಿನಿಧಿಗಳಾದ ಮೇಲೆ ಜನರನ್ನು ಮರೆತು ತಿರುಗಾಡುವ ನಾಯಕರೇ ಹೆಚ್ಚಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಉದ್ಯೋಗ ಮೇಳ ಆಯೋಜಿಸಿ ಮಂಡ್ಯ ಸೇರಿದಂತೆ ರಾಜ್ಯದ ಯುವ ಸಮೂಹಕ್ಕೆ ಒಳಿತು ಮಾಡಲು ಯೋಜನೆ ರೂಪಿಸಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಉಪಯೋಗವಾಗಲಿ ಎಂಬುವ ನಿಟ್ಟಿನಲ್ಲಿ ಈ ಕೆಲಸ ಮಾಡುತ್ತಿರುವುದರಿಂದ ಅದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.