ಮೈಸೂರು: ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದ ಅಂಗವಾಗಿ ಜ.13ರಂದು ಮೇಟಗಳ್ಳಿ ರಿಂಗ್‌ರೋಡ್ ಬಳಿ ಇರುವ ಪರಿವರ್ತನ ಬಿ.ಸ್ಕೂಲ್‌ನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಉದ್ಯೋಗದಾತ ಸಂಸ್ಥೆಯ ಪ್ರತಿನಿಧಿ ಡಿ.ಬಿ.ರುಕ್ಮಾಂಗದ ತಿಳಿಸಿದರು.
ಅಂದು ಬೆಳಗ್ಗೆ 10ರಿಂದ ಮೇಳ ನಡೆಯಲಿದ್ದು, 20ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. 600ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೇಳ ಸಂಪೂರ್ಣ ಉಚಿತವಾಗಿದ್ದು, 18ರಿಂದ 30 ವರ್ಷ ವಯೋಮಾನದ ಎಸ್ಸೆಸ್ಸೆಲ್ಸಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆ ಉಳ್ಳವರು ಭಾಗವಹಿಸಬಹುದು. ಉದ್ಯೋಗದಾತ ಸಂಸ್ಥೆಯೊಂದಿಗೆ ರಂಗನಾಯಕಿ ಸ್ತ್ರೀ ಸಮಾಜ, ಓಂ ಶ್ರೀನಿಕೇತನ ಟ್ರಸ್ಟ್, ರೋಟರಿ ಮೈಸೂರು ಹಾಗೂ ಮಂಡ್ಯ ಅಲ್ಲದೆ ಹಲವರು ನೆರವು ನೀಡಿದ್ದಾರೆ ಎಂದು ಹೇಳಿದರು.
ರಂಗನಾಯಕಿ ಸ್ತ್ರೀ ಸಮಾಜ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ರೋಟರಿ ಮೈಸೂರಿನ ಅಧ್ಯಕ್ಷ ಅರುಣ್ ಬೆಳವಾಡಿ, ರೋಟರಿ ಮಂಡ್ಯ ಅಧ್ಯಕ್ಷೆ ಅನುಪಮಾ ಇದ್ದರು.