

ಮಂಡ್ಯ: ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆಯಿಂದ ಆ.3ರಂದು ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳಲಿದ್ದು, 5 ಸಾವಿರಕ್ಕೂ ಹೆಚ್ಚು ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ವೇದಿಕೆಯ ರಾಜ್ಯ ಕಾರ್ಯದರ್ಶಿ ರಮೇಶ್‌ಚಂದ್ರು ಹೇಳಿದರು.
ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಅವರ ಮಾರ್ಗದರ್ಶನದಲ್ಲಿ ಈಗಾಗಲೇ ಮೂರು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಎಲ್ಲವೂ ಯಶಸ್ವಿಯಾಗಿದೆ. ಇದು ನಾಲ್ಕನೇ ಮೇಳವಾಗಿದ್ದು, ಮುಂದಿನ ದಿನದಲ್ಲಿ ಜಿಲ್ಲಾಕೇಂದ್ರದಲ್ಲಿಯೂ ಆಯೋಜನೆಗೆ ಯೋಜನೆ ರೂಪಿಸಲಾಗುವುದು. ಆ.3ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 4ರವರೆಗೆ ನಡೆಯುವ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಸ್ನಾತಕ ಪೂರ್ವ ಪದವಿ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಸೇರಿದಂತೆ ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಳಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿ ನೋಂದಣಿ ಇದೆ. ಜತೆಗೆ ನೇರವಾಗಿ ಮೇಳದಲ್ಲಿಯೇ ಪಾಲ್ಗೊಂಡು ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಬಹುದು. ವಿದ್ಯಾಭ್ಯಾಸದ ದಾಖಲೆಯೊಂದಿಗೆ ಅಂದು ಹಾಜರಾಗಬಹುದು. ಮಂಡ್ಯ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಅಭ್ಯರ್ಥಿಗಳು ಭಾಗವಹಿಸಬಹುದು ಎಂದು ವಿವರಿಸಿದರು.
ಸಾಮಾನ್ಯವಾಗಿ ಉದ್ಯೋಗ ಮೇಳ ಮಾಡಿದಂತಹ ಸಂದರ್ಭದಲ್ಲಿ ಆಂಗ್ಲ ಭಾಷೆ ಅಥವಾ ಕೌಶಲದ ಸಮಸ್ಯೆ ಎದುರಾಗುತ್ತದೆ. ಇದರಿಂದಾಗಿ ಅದೆಷ್ಟು ಯುವಕ, ಯುವತಿಯರು ಸಂದರ್ಶನದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣದಿಂದಲೇ ಕನ್ನಡವಷ್ಟೇ ಗೊತ್ತಿರುವ ಅಭ್ಯರ್ಥಿಗಳಿಗೆ ಅನುಕೂಲವಾಗಲೆಂದು ಕೆಲ ಹುದ್ದೆಗಳು ಮೀಸಲಾಗಿವೆ. ಇದಲ್ಲದೆ ಅಂಗವಿಕಲರಿಗೂ ಆದ್ಯತೆ ನೀಡಲಾಗುತ್ತಿದೆ. ಪ್ರತಿಷ್ಠಿತ ಕಂಪನಿಗಳನ್ನು ಮೇಳಕ್ಕೆ ಆಹ್ವಾನಿಸಿದ್ದು, ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ಸಿಗಲಿದೆ. ಆದ್ದರಿಂದ ಯಾವ ಅಭ್ಯರ್ಥಿಯಾದರೂ ಹಿಂದೇಟು ಹಾಕದೇ ಸಂದರ್ಶನವನ್ನು ಎದುರಿಸಬೇಕು. ಆಗ ಮಾತ್ರ ಮುಂದೆ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಉದ್ಯಮಿ ಪುಟ್ಟಬಸವಯ್ಯ, ಸಂಚಾಲಕ ಟಿ.ಎಂ.ಶೇಖರ್, ಸಂಯೋಜಕ ರೋಷನ್, ಸೋಮಶೇಖರ್ ಇದ್ದರು.