

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಚೇತನ ಬಿಜಿನೆಸ್ ಸ್ಕೂಲ್ (ಸಿಬಿಎಸ್) ನಿಂದ ನಾಲ್ಕು ಬೇರೆ ಬೇರೆ ಸ್ಥಳಗಳಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಕಾಲೇಜಿನ ನಿರ್ದೇಶಕ ಡಾ. ವಿ.ಎಂ. ಕೊರವಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಲಾ ಫೌಂಡೇಷನ್ನ ಸಹಯೋಗದೊಂದಿಗೆ ಜೂ. 1ರಂದು ಹುಬ್ಬಳ್ಳಿ ಉಣಕಲ್ಲನ ಶ್ರೀನಗರದಲ್ಲಿರುವ ಸಿಬಿಎಸ್ನಲ್ಲಿ, 15ರಂದು ಶಿರಸಿ ಎಂಇಎಸ್ ವಾಣಿಜ್ಯ ಕಾಲೇಜಿನಲ್ಲಿ, 21ರಂದು ಹಾವೇರಿಯ ಕೆಎಲ್ಇ ಸಂಸ್ಥೆಯ ಜಿ.ಎಚ್. ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಾಗೂ 29ರಂದು ಗದಗನ ಗದಗನ ಜೆ.ಟಿ. ಕಾಲೇಜಿನಲ್ಲಿ ನಡೆಯಲಿದೆ ಎಂದರು.
ಎಂಫಾಸಿಸ್, ಎಸ್ಬಿಐ ಲೈಫ್, ಜಿಯೋ, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಮೋರ್ ಸೇರಿ 20ಕ್ಕೂ ಹೆಚ್ಚು ಕಂಪನಿಗಳು 1200 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಲಿವೆ. ಕಳೆದ 13 ವರ್ಷಗಳಿಂದ ಪ್ರತಿ ವರ್ಷ ಹುಬ್ಬಳ್ಳಿಯಲ್ಲಿ ಉದ್ಯೋಗ ಮೇಳ ಆಯೋಜಿಸುತ್ತ ಬಂದಿದ್ದೇವು. ಈ ಬಾರಿ ನಾಲ್ಕು ಜಿಲ್ಲೆಗಳಲ್ಲಿ ಆಯೋಜನೆ ಮಾಡಿದ್ದೇವೆ ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಬೇರೆ ಕಾಲೇಜಿನ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಹುಬ್ಬಳ್ಳಿ ಸಿಬಿಎಸ್ ನಲ್ಲಿ ಜೂ. 1ರಂದು ಬೆಳಗ್ಗೆ 10 ಗಂಟೆಗೆ ಮೂರುಸಾವಿರ ಮಠ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪಾಲ್ಗೊಳ್ಳುವರು. ಮುಂದಿನ ದಿನಗಳಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಹತೆಯ ಅಭ್ಯರ್ಥಿಗಳಿಗೆ ಉದ್ಯೋಗ ಮೇಳ ನಡೆಸುವ ಬಗ್ಗೆ ಯೋಚಿಸಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಬಿಎಸ್ ನಿರ್ದೇಶಕರಾದ ರಾಮಾಕಾಂತ ಕುಲಕರ್ಣಿ, ಪ್ರೊ. ಅನಿರುದ್ಧ ಆರ್.ಎ., ಕಿರಣಕುಮಾರ ಗಲಗಲಿ ಇದ್ದರು.