ಹುಬ್ಬಳ್ಳಿ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ತಾಲೂಕಿನ ಅದರಗುಂಚಿಯ ಚನ್ನಬಸಮ್ಮ ಈಶ್ವರಗೌಡ ಚಿಕ್ಕನಗೌಡ್ರ ಗ್ರಾಮೀಣ ಶಿಕ್ಷಣ ಸಂಸ್ಥೆಯ ಸಿಐಸಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜು. 9ರಂದು ಬೆಳಗ್ಗೆ 9ಕ್ಕೆ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ ಎಂದು ಸಿಐಸಿ ಎಂಡಿ ಆರ್.ಎಫ್. ಭರಮಗೌಡ್ರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದರಗುಂಚಿಯಲ್ಲಿ 14 ವರ್ಷಗಳ ಹಿಂದೆ ಆರಂಭವಾದ ಮಹಾವಿದ್ಯಾಲಯದಲ್ಲಿ ಇಂದು 2500ಕ್ಕೂ ಹೆಚ್ಚು ವಿದ್ಯಾಥಿರ್ಗಳು ಓದುತ್ತಿದ್ದಾರೆ. ಕಳೆದ 5 ವರ್ಷದಿಂದ ಮಹಾವಿದ್ಯಾಲಯ ಹಾಗೂ ತಾಲೂಕಿಗೆ ಸೀಮಿತವಾಗಿ ಉದ್ಯೋಗ ಮೇಳ ಹಾಗೂ ಕ್ಯಾಂಪಸ್ ಸಂದರ್ಶನ ಮಾಡಲಾಗುತ್ತಿತ್ತು. ಇದೀಗ ಮೊದಲ ಬಾರಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಜತೆಗೂಡಿ ಜಿಲ್ಲಾ ಮಟ್ಟದ ಮೇಳ ಆಯೋಜನೆ ಮಾಡಲಾಗಿದೆ ಎಂದರು.
18ರಿಂದ 35 ವಯೋಮಿತಿಯ ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿಧರ ವಿದ್ಯಾಥಿರ್ಗಳು ಮೇಳದಲ್ಲಿ ಭಾಗಿಯಾಗಬಹುದು. ಗ್ರಾಮೀಣ ಭಾಗದ ಕಲಘಟಗಿ, ಕುಂದಗೋಳ, ನವಲಗುಂದ, ಅಣ್ಣಿಗೇರಿ ಸೇರಿ ಎಲ್ಲೆಡೆ ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗಿದೆ ಎಂದರು.
27ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ಅಭ್ಯಥಿರ್ಗಳ ನೇರ ಸಂದರ್ಶನ ನಡೆಸಲಿವೆ. ಆಸಕ್ತರು, ತಮ್ಮಆಧಾರ ಕಾರ್ಡ್, ಬಯೋಡೇಟಾದೊಂದಿಗೆ ಸ್ವಂತ ಖಚಿರ್ನಲ್ಲಿ ಉದ್ಯೋಗ ಮೇಳಕ್ಕೆ ಹಾಜರಾಗಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಹಾಗೂ ಸಿಐಸಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಐ. ಚಿಕ್ಕನಗೌಡ್ರ ಅವರು ಅಂದು ಬೆಳಗ್ಗೆ 9ಕ್ಕೆ ಉದ್ಯೋಗ ಮೇಳ ಉದ್ಘಾಟನೆ ನೆರವೇರಿಸುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಟಿ. ಭೈರಪ್ಪನವರ, ಎಸ್.ಎಂ. ಕಳಸೂರ, ಎಂಕಾಂ ವಿಭಾಗದ ಮುಖ್ಯಸ್ಥ ಸಿ.ಎಸ್. ಭರಮಗೌಡ್ರ, ರಾಜು ಪಾಟೀಲ, ರೋಹಿತ ಇದ್ದರು.