

ಬೆಂಗಳೂರು: ಕೌಶಲ, ಮರುಕೌಶಲ ಹಾಗೂ ಕೌಶಲ ಉನ್ನತೀಕರಣಕ್ಕೆ ಒತ್ತು ನೀಡುವವರಿಗೆ ನಿರುದ್ಯೋಗದ ಸಮಸ್ಯೆ ಎದುರಾಗದು ಎಂದು ಮಲ್ಲೇಶ್ವರಂ ಶಾಸಕ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ
ಬಸವ ಜಯಂತಿ ಪ್ರಯುಕ್ತ ಡಾ.ಅಶ್ವತ್ಥ ನಾರಾಯಣ ಫೌಂಡೇಷನ್ ಏರ್ಪಡಿಸಿದ್ದ ಮಲ್ಲೇಶ್ವರಂ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಸ ಉದ್ಯಮ ಹಾಗೂ ಸ್ಟಾರ್ಟಪ್ ಕ್ಷೇತ್ರಗಳು ಕೌಶಲವಿರುವ ಪ್ರತಿಭಾವಂತರಿಗಾಗಿ ಶೋಧನೆ ನಡೆಸುತ್ತಿವೆ. ಅದರಲ್ಲೂ ಬೆಂಗಳೂರು ನಗರವಂತೂ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬೆಳವಣಿಗೆ ಕಾಣುತ್ತಿರುವ ನಗರಗಳಲ್ಲಿ ಒಂದಾಗಿದೆ. ಹೀಗಾಗಿ, ಇಲ್ಲಿ ಉದ್ಯೋಗಾವಕಾಶಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೌಶಲ ಹೊಂದಿದವರಿಗೆ ಮಾತ್ರ ಅವಕಾಶ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
97 ಕಂಪನಿಗಳು ಪಾಲ್ಗೊಂಡಿದ್ದ ಉದ್ಯೋಗ ಮೇಳದಲ್ಲಿ 1,075 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಇವರಲ್ಲಿ 104 ಅಭ್ಯರ್ಥಿಗಳು ಸ್ಥಳದಲ್ಲೇ ನೇಮಕಾತಿಗೊಂಡಿದ್ದು, 506 ಅಭ್ಯರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.
ಮೇಳದಲ್ಲಿ ಈಶ್ವರ ಸೇವಾ ಮಂಡಳಿ ಅಧ್ಯಕ್ಷೆ ಸೌಭಾಗ್ಯ, ಎಫ್‌ಕೆಸಿಸಿಐ ಅಧ್ಯಕ್ಷ ಬಾಲಕೃಷ್ಣ, ಬಿಜೆಪಿ ಮುಖಂಡ ಎಸ್.ಹರೀಶ ಮತ್ತಿತರರು ಪಾಲ್ಗೊಂಡಿದ್ದರು.