ಮೇ 17ರಂದು ಶಿಕ್ಷಕರಿಗಾಗಿ ಉದ್ಯೋಗ ಮೇಳ: ಅರಿವು ಭೋಧಿ ಫೌಂಡೇಷನ್ ಟ್ರಸ್ಟಿ ಗಣೇಶ್ ಮಾಹಿತಿ

Job fair for teacher selection Mandya
Published on

ಮಂಡ್ಯ: ಮೈಸೂರು ವಿಭಾಗೀಯ ಮಟ್ಟದ ಖಾಸಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಾತಿಗಾಗಿ ಮೇ 17ರಂದು ನಗರದಲ್ಲಿ ಶಿಕ್ಷಕರಿಗಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಅರಿವುಭೋಧಿ ಫೌಂಡೇಷನ್ ಟ್ರಸ್ಟಿ ಗಣೇಶ್ ಮಾಹಿತಿ ನೀಡಿದರು.

ಸರ್ಕಾರಿ ಮಹಿಳಾ ಕಾಲೇಜು(ಕಲ್ಲುಕಟ್ಟಡ), ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ರೋಟರಿ ವಿದ್ಯಾಸಂಸ್ಥೆ ಹಾಗೂ ಸಂತ ಜೋಸೆಫರ ವಿದ್ಯಾಮಂದಿರದ ಆವರಣದಲ್ಲಿ ಅಂದು ಬೆಳಗ್ಗೆ 8ಗಂಟೆಯಿಂದ ಸಂಜೆ 4ರವರೆಗೆ ಉದ್ಯೋಗ ಮೇಳ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದಿನ ಕಾರ್ಯಕ್ರಮದ ಸಾನಿಧ್ಯವನ್ನು ಅರೆ ಶಂಕರಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ವಹಿಸಲಿದ್ದಾರೆ. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸುವರು. ಮೈಸೂರು, ಚಾಮರಾಜನಗರ, ಹಾಸನ, ಕೊಡಲು, ಮಂಡ್ಯ ಜಿಲ್ಲೆಗಳ ಖಾಸಗಿ ಶಿಕ್ಷಣ ಸಂಸ್ಥೆ ಭಾಗವಹಿಸಲಿವೆ. ಒಟ್ಟು 150 ಶಿಕ್ಷಣ ಸಂಸ್ಥೆಗಳು ಸಂದರ್ಶನ ಮಾಡಿ ಶಿಕ್ಷಕರ ಆಯ್ಕೆ ಮಾಡಲಿದ್ದು, ಉದ್ಯೋಗಾಕಾಂಕ್ಷಿತ ಶಿಕ್ಷಕರು 10 ಶಿಕ್ಷಣ ಸಂಸ್ಥೆಗಳಿಗೆ ಸಂದರ್ಶನ ನೀಡಬಹುದಾಗಿದೆ. 65 ಕನ್ನಡ ಭಾಷಾ ಶಿಕ್ಷಕರು, 105 ಆಂಗ್ಲ ಭಾಷಾ ಶಿಕ್ಷಕರು, 110 ಗಣಿತ ಶಿಕ್ಷಕರು, 150 ವಿಜ್ಞಾನ ಶಿಕ್ಷಕರು, 160 ಸಮಾಜ ವಿಜ್ಞಾನ ಶಿಕ್ಷಕರು, 90 ಹಿಂದಿ ಭಾಷಾ ಶಿಕ್ಷಕರು, 55 ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕಾಲೇಜಿನ ಉಪನ್ಯಾಸಕರು, ವಿಜ್ಞಾನ, ಭೌತಶಾಸ್ತ್ರ, ಜೀವಶಾಸ್ತ್ರ, ಇತಿಹಾಸ ಬೋಧಿಸುವ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಫೌಂಡೇಷನ್‌ನ ಅಧ್ಯಕ್ಷ ಪ್ರಕಾಶ್ ಸಿ.ಕಾರಿಯಪ್ಪ, ಸುರೇಶ್, ಕ್ರಾಂತಿಸಿಂಹ, ಬಿ.ಎಸ್.ಅನುಪಮಾ ಇದ್ದರು.

ಮಿಸ್ಡ್ ಕಾಲ್ ಕೊಟ್ಟು ನೋಂದಣಿ

ಉದ್ಯೋಗ ಮೇಳದಲ್ಲಿ ಡಿ.ಇಡಿ, ಬಿ.ಇಡಿ, ಎಂ.ಎ, ಎಂ.ಎಸ್, ಸಿ.ಪಿ, ಎಚ್.ಡಿ, ಎನ್.ಟಿ.ಸಿ, ಮಾಂಟೆಸೊರಿ ಟ್ರೈನಿಂಗ್ ಸರ್ಟಿಫಿಕೇಟ್ ಹೊಂದಿದ ಹಾಗೂ ಉಪನ್ಯಾಸ ವೃತ್ತಿ ನೈಪುಣ್ಯತೆ ಹೊಂದಿರುವವರು ಭಾಗವಹಿಸಬಹುದು. ಈ ಹಿನ್ನೆಲೆಯಲ್ಲಿ 3000ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅರ್ಹತೆವುಳ್ಳ ಹಾಗೂ ಆಸಕ್ತ ಶಿಕ್ಷಕರು ಮೊ.ಸಂ 9482049263 ಮಿಸ್ಡ್ ಕಾಲ್ ಅಥವಾ ವೆಬ್‌ಸೈಟ್ www.arivubodhi.org ಮೂಲಕ ಹೆಸರನ್ನು ಉಚಿತವಾಗಿ ನೋಂದಾಯಿಸಬಹುದಾಗಿದೆ.

ಇನ್ನು ಮೇಳಕ್ಕೆ ಬರುವ ಉದ್ಯೋಗಾಕಾಂಕ್ಷಿಗಳು ಪ್ರಾಯೋಗಿಕವಾಗಿ ಪಾಠ ಮಾಡಲು ಸಿದ್ಧತೆ ಮಾಡಿಕೊಂಡಿರಬೇಕು. ಸ್ವವಿವರ ಜತೆಗೆ ವ್ಯಾಸಂಗ ಪ್ರಮಾಣ ಪತ್ರದ 10 ಜೆರಾಕ್ಸ್ ಪ್ರತಿ ತರಬೇಕು. ಶಿಕ್ಷಣ ಸಂಸ್ಥೆಯೊಂದಿಗೆ ಮುಕ್ತವಾಗಿ ವೇತನ ಜತೆಗೆ ಸಂಸ್ಥೆಯ ನೀತಿ, ನಿಯಮದ ಬಗ್ಗೆ ಚರ್ಚಿಸಿ ಉದ್ಯೋಗಕ್ಕೆ ಸೇರಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net