

ಹಾನಗಲ್ಲ: ಪಟ್ಟಣದ ಗುರುಭವನದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಮೇಳದಲ್ಲಿ 1196 ಉದ್ಯೋಗಾಕಾಂಕ್ಷಿ ಯುವಕ, ಯುವತಿಯರಿಗೆ ಸ್ಥಳದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಮೇಳ ಯಶಸ್ವಿಯಾಯಿತು.
ಲೋಯಲ ವಿಕಾಸ ಕೇಂದ್ರ, ರೋಶನಿ ಟ್ರಸ್ಟ್, ಉದ್ಯೋಗ ಸಮೃದ್ಧಿ ಕೇಂದ್ರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸೇರಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ಉದ್ಯೋಗಾಕಾಂಕ್ಷಿಗಳ ದಂಡೇ ಹರಿದು ಬಂದಿತ್ತು. ಒಟ್ಟು 1720 ಜನರು ನೋಂದಣಿ ಮಾಡಿಕೊಳ್ಳಲಾಯಿತು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೊಮಾ ತೇರ್ಗಡೆಯಾದವರು ಮತ್ತು ಪದವೀಧರರು ಸೇರಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾಗಿ ಉದ್ಯೋಗಾವಕಾಶ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾದರು. ಬೆಳಗ್ಗೆ 8.30ಕಕೆ ಆರಂಭಗೊಂಡ ನೇಮಕ ಪ್ರಕ್ರಿಯೆ ಸಂಜೆ 4.30ಕ್ಕೆ ಮುಕ್ತಾಯಗೊಂಡಿತು.
ಶಿಬಿರ ಉದ್ಘಾಟಿಸಿದ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ತಾಲೂಕಿನಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಉದ್ಯೋಗ ಸಮೃದ್ಧಿ ಕೇಂದ್ರ ಆರಂಭಿಸಿ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಇನ್ಮುಂದೆ ಪ್ರತಿ 6 ತಿಂಗಳಿಗೊಮ್ಮೆ ಇಂತಹ ಮೇಳ ಆಯೋಜಿಸುವ ಉದ್ದೇಶವಿದೆ. ಉದ್ಯೋಗ ಸಮೃದ್ಧ ಹಾನಗಲ್ಲ ಮಾಡಲು ಕಾಳಜಿ ವಹಿಸಲಾಗುವುದು ಎಂದು ತಿಳಿಸಿದರು.
ಲೋಯಲ ಸಮೂಹ ಸಂಸ್ಥೆಗಳ ಮುಖ್ಯಸ್ಥ ಫಾ.ಮೆಲ್ವಿನ್ ಲೋಬೊ, ಲೋಯಲ ವಿಕಾಸ ಕೇಂದ್ರದ ನಿರ್ದೇಶಕ ಫಾ.ಜೆರಾಲ್ಡ್, ಸಹ ನಿರ್ದೇಶಕ ಫಾ.ಜೇಸಸ್, ರೋಶನಿ ಟ್ರಸ್ಟ್ ನಿರ್ದೇಶಕಿ ಸಿಸ್ಟರ್ ಅನಿತಾ ಡಿಸೋಜಾ, ಹ್ಯುಮ್ಯಾನಿಟಿ ಫೌಂಡೇಷನ್ ಅಧ್ಯಕ್ಷೆ ಸ್ವಾತಿ ಮಾಳಗಿ, ಪ್ರಗತಿಪರ ಮುಖಂಡ ಡಾ.ಎನ್.ಎಫ್. ಕಮ್ಮಾರ, ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಇತರರಿದ್ದರು.