

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಬಹುನಿರೀಕ್ಷಿತ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿನ 40 ತೃತೀಯ ಲಿಂಗಿಗಳು ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ತೃತೀಯ ಲಿಂಗಿಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಕಳಕಳಿಗೆ ಈ ಬೃಹತ್ ಉದ್ಯೋಗ ಮೇಳ ಉತ್ತಮ ವೇದಿಕೆ ಕಲ್ಪಿಸಿದೆ. ಹೆಸರು ನೋಂದಾಯಿಸಿಕೊಂಡಿರುವ ಅಷ್ಟೂ ತೃತೀಯ ಲಿಂಗಿಗಳಿಗೆ ಅವರವರ ವಿದ್ಯಾರ್ಹತೆ ಆಧಾರದ ಮೇಲೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತವೂ ಉತ್ಸುಕತೆ ತೋರಿದೆ. ಈ ಬಗ್ಗೆ ವಿವಿಧ ಕಂಪನಿಗಳೊಂದಿಗೆ ವಿಷಯ ವಿನಿಮಯ ಮಾಡಿಕೊಂಡಿದ್ದು, ತೃತೀಯ ಲಿಂಗಿಗಳ ಬದುಕಿಕೊಂದು ಭದ್ರತೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ಬೃಹತ್ ಉದ್ಯೋಗ ಮೇಳ ಮೈಲುಗಲ್ಲಾಗಲಿದೆ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲೇ ಸಂದರ್ಶನ: ತೃತೀಯ ಲಿಂಗಿಗಳಿಗೆ ಸ್ಥಳದಲ್ಲೇ ಅವರವರ ವಿದ್ಯಾರ್ಹತೆಗೆ ಅನುಗುಣವಾಗಿ ನೇರ ಸಂದರ್ಶನ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ವಿತರಿಸುವ ಸಂಬಂಧ ಜಿಲ್ಲಾಡಳಿತದ ಅಧಿಕಾರಿಗಳು ಕಂಪನಿಗಳಿಗೆ ಮನವಿ ಮಾಡಿದೆ. ಶುಕ್ರವಾರ ನಡೆಯುವ ಉದ್ಯೋಗ ಮೇಳದಲ್ಲಿ ಎಷ್ಟು ಮಂದಿ ತೃತೀಯ ಲಿಂಗಿಗಳಿಗೆ ಉದ್ಯೋಗ ಭದ್ರತೆ ದೊರೆಯಲಿದೆ, ಎಷ್ಟು ಮಂದಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ಲಭಿಸಲಿದೆ ಎಂಬ ಕುತೂಹಲ ಮೂಡಿಸಿದೆ.
182 ಕಂಪನಿಗಳು ಭಾಗಿ: ರಾಜ್ಯದ ವಿವಿಧ ಕಡೆಗಳಲ್ಲಿನ ಕಂಪನಿಗಳು ಸೇರಿ ರಾಜಧಾನಿ ಬೆಂಗಳೂರಿನ ಹಲವು ಕಂಪನಿಗಳು ಹಾಗೂ ಮುಖ್ಯವಾಗಿ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಕಂಪನಿಗಳು ಉದ್ಯೋಗ ಮೇಳದಲ್ಲಿ ನೋಂದಾಯಿಸಿಕೊಂಡಿದ್ದು ಅಭ್ಯರ್ಥಿಗಳ ಆಯ್ಕೆಗೆ ಉತ್ಸುಕತೆ ತೋರಿಸಿವೆ. ಪ್ರಸ್ತುತ 182 ಕಂಪನಿಗಳು ನೋಂದಾಯಿಸಿಕೊಂಡಿದ್ದು, ಸುಮಾರು 28 ಸಾವಿರಷ್ಟು ಉದ್ಯೋಗಿಗಳ ಬೇಡಿಕೆ ವ್ಯಕ್ತಪಡಿಸಿವೆ.
22489 ಅಭ್ಯರ್ಥಿಗಳು ನೋಂದಣಿ: ಪುರುಷ ಹಾಗೂ ಮಹಿಳೆಯರು ಸೇರಿ 22489 ಅಭ್ಯರ್ಥಿಗಳು ಇದುವರೆಗೆ ಆನ್‌ಲೈನ್‌ನಲ್ಲಿ ಉದ್ಯೋಗಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 11089 ಮಂದಿ ಪುರುಷ ಅಭ್ಯರ್ಥಿಗಳು ಹಾಗೂ 11400 ಮಹಿಳೆಯರು ಇದ್ದಾರೆ. ಶುಕ್ರವಾರ ಸ್ಥಳದಲ್ಲೇ ನೋಂದಣಿಗೆ ಅವಕಾಶವಿರುವುದರಿಂದ ಇದರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ, ಪಿಯುಸಿ ಅಭ್ಯರ್ಥಿಗಳು ಅಧಿಕ ಇದುವರೆಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿರುವವರಲ್ಲಿ ಬಹುಪಾಲು ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಹತೆ ಹೊಂದಿದವರೇ ಆಗಿದ್ದಾರೆ. ಪ್ರಸ್ತುತ 10382 ಅಭ್ಯರ್ಥಿಗಳು ಈ ವರ್ಗಕ್ಕೆ ಸೇರಿದವರಾಗಿದ್ದಾರೆ, ಇದರೊಂದಿಗೆ ಆಯುರ್ವೇದ ಕ್ಷೇತ್ರದಿಂದ 20 ಅಭ್ಯರ್ಥಿಗಳು, ತಾಂತ್ರಿಕ ವಿದ್ಯಾರ್ಹತೆಯ 3504 ಅಭ್ಯರ್ಥಿಗಳು ವಿವಿಧ ಪದವಿ ಪಡೆದ 7908 ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಐಟಿಐ ವಿದ್ಯಾರ್ಹತೆ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದೆ, ಉಳಿದ ಇತರೆ ವಿದ್ಯಾರ್ಹತೆ ಹೊಂದಿರುವ 700ಕ್ಕೂ ಹೆಚ್ಚು ಅಭ್ಯರ್ಥಿಗಳು ಪಟ್ಟಿಯಲ್ಲಿದ್ದಾರೆ.
80ಕ್ಕೂ ಹೆಚ್ಚು ಕೊಠಡಿಗಳು ಸಿದ್ದ ಹೆಸರು ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳಿಗೆ ಅವರವರ ವಿದ್ಯಾರ್ಹತೆ ಅನುಗುಣವಾಗಿ ಎಬಿಸಿಡಿಇ ಎಂಬ ಬ್ಲಾಕ್‌ಗಳನ್ನಾಗಿ ವಿಂಗಡಿಸಲಾಗಿದೆ, 80ಕ್ಕೂ ಹೆಚ್ಚು ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಉದ್ಯೋಗಕಾಂಕ್ಷಿಗಳಿಗೆ ಮಾರ್ಗದರ್ಶನ ಮಾಡಲು 20 ಕೌಂಟರ್ ತೆರೆಯಲಾಗಿದ್ದು, ಒಂದು ಕೌಂಟರ್‌ನಲ್ಲಿ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿ, ಪಿಡಿಒ, ಉಪನ್ಯಾಸಕರು ಸೇರಿ 10 ಸ್ವಯಂ ಸೇವಕರನ್ನು ನಿಯೋಜಿಸಲಾಗಿದ್ದು, ಇವರು ಉದ್ಯೋಗಾಕಾಂಕ್ಷಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಕಂಪನಿಗಳ ಸಂದರ್ಶನ ಕೊಠಡಿಗೆ ತೆರಳಲು ಮಾರ್ಗದರ್ಶನ ಮಾಡುವರು. ಇದುವರೆಗೆ ನೋಂದಣಿಯಾಗಿರುವ ಅಭ್ಯರ್ಥಿಗಳ ವಿದ್ಯಾರ್ಹತೆ ಆಧಾರದ ಮೇಲೆ ಜಿಲ್ಲಾಡಳಿತ ಮ್ಯಾಫಿಂಗ್ ಮಾಡಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಮುಂಜಾಗ್ರತೆ ವಹಿಸಿದೆ.
ಎಲ್ಲಿ?
*ದೇವನಹಳ್ಳಿ ಟೌನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣ.
ಎಷ್ಟೋತ್ತಿಗೆ?
ಸೆ.13ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆ.
ಪ್ರತಿಷ್ಠಿತ ಕಂಪನಿಗಳು ಭಾಗಿ
ಫಾಕ್ಸ್‌ಕಾನ್, ಏಕ್ಸೈಡ್, ವೋಲ್ವೋ, ಎಲ್ಟಿ, ಅಜೆಕ್ಸ್, ಇಂಡಿ ಮೀಮ್, ತ್ರಿವೇಣಿ ಟ್ರಬೈನ್, ಎಬಿಬಿ ಇಂಡಿಯಾ ಸೇರಿ 180ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ.
ಯಾರು ಭಾಗವಹಿಸಬಹುದು?
ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ- ತಾಂತ್ರಿಕೇತರ ವಿದ್ಯಾಭ್ಯಾಸ, ವಿವಿಧ ತರಬೇತಿ ಸಂಸ್ಥೆಗಳಲ್ಲಿ ಕೌಶಲ ತರಬೇತಿ ಪಡೆದ ಅಭ್ಯರ್ಥಿಗಳು, ಯಾವುದೇ ವಿದ್ಯಾರ್ಹತೆ ಹೊಂದಿದ ತೇರ್ಗಡೆ ಹಾಗೂ ನಪಾಸಾಗಿರುವ ಉದ್ಯೋಗಾಂಕ್ಷಿಗಳು ಭಾಗವಹಿಸಬಹುದಾಗಿರುತ್ತದೆ. ಹೊರ ಜಿಲ್ಲೆಯ ಉದ್ಯೋಗಾಂಕ್ಷಿಗಳು, ಆನ್‌ಲೈನ್‌ನಲ್ಲಿ ನೋಂದಣಿಯಾಗದ ಅಭ್ಯರ್ಥಿಗಳು ಕೂಡ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಪಾರ್ಕಿಂಗ್ ವ್ಯವಸ್ಥೆ
ಉದ್ಯೋಗಾಕಾಂಕ್ಷಿಗಳ ವಾಹನ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಆಸ್ಪತ್ರೆ ಪಕ್ಕದಲ್ಲಿನ ರಸ್ತೆ ಮೂಲಕ ತೆರಳಿ ಕ್ರೀಡಾಂಗಣದಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ.
ಇದೊಂದು ಬಹುನಿರೀಕ್ಷಿತ ಕಾರ್ಯಕ್ರಮ, ಸಾವಿರಾರು ಮಂದಿಗೆ ಒಂದೇ ಸೂರಿನಡಿ ಉದ್ಯೋಗ ಕಲ್ಪಿಸಿಕೊಡಬೇಕೆಂಬ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದರಲ್ಲಿ 40 ತೃತೀಯ ಲಿಂಗಿಗಳು ಹೆಸರು ನೋಂದಾಯಿಸಿಕೊಂಡಿರುವುದು ವಿಶೇಷ. ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಇದೊಂದು ಉತ್ತಮ ವೇದಿಕೆಯಾಗಿದೆ. ನಿರೀಕ್ಷೆಯಷ್ಟು ಮಂದಿಗೆ ಉದ್ಯೋಗ ಲಭಿಸಿದರೆ ಈ ಕಾರ್ಯಕ್ರಮ ಸಾರ್ಥಕತೆ ಪಡೆಯುತ್ತದೆ, ಉದ್ಯೋಗಾಕಾಂಕ್ಷಿಗಳು ಇಂಥ ಉತ್ತಮ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು.
ಡಾ.ಕೆ.ಎನ್.ಅನುರಾಧಾ, ಜಿಲ್ಲಾ ಪಂಚಾಯಿತಿ ಸಿಇಒ (ಪೊಟೋ ಬಳಸಿ)