ಸ್ಥಳೀಯರಿಗೆ ಉದ್ಯೋಗವಕಾಶಕ್ಕೆ ಆದ್ಯತೆ ನೀಡಬೇಕು

job
ದೇವನಹಳ್ಳಿ ಜಿಲ್ಲಾಡಳಿತಭವನದಲ್ಲಿ ವಿವಿಧ ಕಂಪನಿಗಳ ಮುಖ್ಯಸ್ಥರೊಂದಿಗೆ ಸಚಿವ ಕೆ.ಎಚ್.ಮುನಿಯಪ್ಪ ಸಂವಾದ ನಡೆಸಿದರು. ಡಿಸಿ ಡಾ.ಎನ್.ಶಿವಶಂಕರ್, ಸಿಇಒ ಅನುರಾಧಾ, ಉಪವಿಭಾಗಾಧಿಕಾರಿ ದುರ್ಗಶ್ರೀ, ಜಿಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ನರೇಂದ್ರ ಬಾಬು ಇದ್ದರು.
Published on

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸಲಹೆ

ಜಿಲ್ಲಾಡಳಿತಭವನದಲ್ಲಿ ಕೈಗಾರಿಕಾ ಮುಖ್ಯಸ್ಥರೊಂದಿಗೆ ಸಂವಾದ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವ ಕಂಪನಿಗಳು ಉದ್ಯೋಗಕ್ಕೆ ಅನುಗುಣವಾಗಿ ಸ್ಥಳೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಕಂಪನಿಗಳ ಮುಖ್ಯಸ್ಥರಿಗೆ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕೌಶಲ್ಯ ಮಿಷನ್ ಸಹಯೋಗದಲ್ಲಿ ನಡೆಯುವ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿ ಬುಧವಾರ ಕೈಗಾರಿಕೆ ಮುಖ್ಯಸ್ಥರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತಿದ ನಂತರ ಕೈಗಾರಿಕಾ ಪ್ರದೇಶ ವ್ಯಾಪ್ತಿ ಹೆಚ್ಚಾಗುತ್ತಿದೆ. ಹಲವು ರೈತಾಪಿ ಕುಟುಂಬಗಳು ಕೈಗಾರಿಕೆಗಳಿಗೆ ಭೂಮಿ ನೀಡಿದ್ದಾರೆ. ಹಲವು ಕುಟುಂಬಗಳು ಕೃಷಿಯನ್ನು ಅವಲಂಬಿಸಿದ್ದವು. ಇದನ್ನು ಅರಿತು ಮನೆಗೊಂದು ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಅಯೋಜಿಸಲಾಗುತ್ತಿದೆ. ಉದ್ಯೋಗ ಮೇಳದಲ್ಲಿ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಕಲ್ಪಿಸಿಕೊಟ್ಟರೆ ಭೂಮಿ ಕಳೆದುಕೊಂಡ ಹಲವು ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕೈಗಾರಿಕೆಗಳು ಸ್ಥಳಿಯ ಅರ್ಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಿ ನೇಮಕಾತಿ ಮಾಡಿಕೊಳ್ಳಿ ಎಂದು ಕೈಗಾರಿಕೆಗಳ ಮುಖ್ಯಸ್ಥರಿಗೆ ಸಲಹೆ ನೀಡಿದರು.
ಸರ್ಕಾರ ಸದಾ ಸಿದ್ದ: ಜಿಲ್ಲೆಯಲ್ಲಿರುವ ಕೈಗಾರಿಕೆಗಳಿಗೆ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಹಾಗೂ ಇನ್ನಿತರ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಹಾಗೂ ಕೈಗಾರಿಕೆಗಳ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಸಿದ್ಧವಿರುತ್ತದೆ ಎಂದು ಆಶ್ವಾಸನೆ ನೀಡಿದರು. ಮುಂದಿನ ದಿನಗಳಲ್ಲಿ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ಯಾವ ರೀತಿ ಕೌಶಲ ಹೊಂದಿದ ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂಬುದರ ಮಾಹಿತಿ ಪಡೆದು ಅರ್ಹ ಅಭ್ಯರ್ಥಿಗಳಿಗೆ ಕೌಶಲ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಒತ್ತಡ ಎದುರಿಸಲು ಸಿದ್ದವಾಗಿರಬೇಕು:ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಹೊಸಕೋಟೆ ವಿಧಾನಸಭಾ ಕ್ಷೇತ್ರ ಶಾಸಕ ಶರತ್‌ಕುಮಾರ್ ಬಚ್ಚೇಗೌಡ ಮಾತನಾಡಿ, ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವ ಕಂಪನಿಗಳು ಪ್ರಸ್ತುತ ನೋಂದಣಿ ಆಗಿರುವ ಉದ್ಯೋಗಾಂಕ್ಷಿಗಳ ಪೈಕಿ ಅಂದಾಜು 500 ಅಭ್ಯರ್ಥಿಗಳನ್ನು ಒಂದು ಕಂಪನಿ ಸಂದರ್ಶನ ಮಾಡಬೇಕಿದೆ. ಒತ್ತಡದ ಪರಿಸ್ಥಿತಿಯನ್ನು ಎದುರಿಸಲು ಕಂಪನಿಗಳು ಸಿದ್ಧರಿರಬೇಕು ಎಂದರು.
ಖಾಯಂ ಉದ್ಯೋಗ ನೇಮಕಾತಿಗೆ ಮೊದಲ ಆದ್ಯತೆ ನೀಡಿ. ಕಂಪನಿಗಳು ಗೂಗಲ್ ಶೀಟ್‌ನಲ್ಲಿ ಖಾಲಿ ಇರುವ ಉದ್ಯೋಗಗಳ ಬಗ್ಗೆ ಪ್ರತಿ ತಿಂಗಳು ಮಾಹಿತಿ ತುಂಬಿದರೆ ಯಾವ ಕಂಪನಿಯಲ್ಲಿ ಯಾವ ಉದ್ಯೋಗ ಅವಕಾಶವಿದೆ ಎಂಬುದರ ಬಗ್ಗೆ ಉದ್ಯೋಗಾಂಕ್ಷಿಗಳಿಗೆ ಮಾಹಿತಿ ಸಿಕ್ಕಂತಾಗುತ್ತದೆ, ಇದರಿಂದ ಉದ್ಯೋಗಾಂಕ್ಷಿಗಳ ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
20 ಸಾವಿರ ಉದ್ಯೋಗಾಂಕ್ಷಿಗಳು ಭಾಗಿ:ಸೆ.13ರಂದು ದೇವನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಬೃಹತ್ ಉದ್ಯೋಗಮೇಳಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು, ಅಂದಾಜು 20 ಸಾವಿರ ಉದ್ಯೋಗಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದರು. ಅಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. 20 ರಿಸೆಪ್ಷನ್‌ಕೌಂಟರ್‌ಗಳನ್ನು ತೆರೆದು ಉದ್ಯೋಗಾಂಕ್ಷಿಗಳಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಕಂಪನಿಗಳಿಗೆ ತೆರಳಲು ಮಾರ್ಗದರ್ಶನ ಮಾಡಲಾಗುವುದು ಎಂದು ತಿಳಿಸಿದರು. ಉದ್ಯೋಗಾಂಕ್ಷಿಗಳಿಗೆ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಮೇಳ ಯಶಸ್ವಿಯಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net