

ಹನೂರು: ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಪ್ರಕರಣದಿಂದ ಹಲ್ಲೆಗೊಳಗಾಗಿ ಭಯಭೀತರಾಗಿದ್ದ ಮೆಂದಾರೆ ಗ್ರಾಮದ ಗಿರಿಜನರು ನರೇಗಾ ಯೋಜನೆಯಡಿ ಕೂಲಿ ಕೆಲಸ ಪಡೆಯಲು ಮುಂದಾಗಿದ್ದು, ಗುರುವಾರ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿಗೆ ಆಗಮಿಸಿ ಜಾಬ್ ಕಾರ್ಡ್ ನವೀಕರಿಸಿಕೊಂಡರು.
ಏ.26ರಂದು ನಡೆದ ಮತಗಟ್ಟೆ ಧ್ವಂಸ ಘಟನೆಯಿಂದ ಮೆಂದಾರೆ ಗ್ರಾಮದ 20ಕ್ಕೂ ಹೆಚ್ಚು ಜನರು ಹಲ್ಲೆಗೊಳಗಾಗಿದ್ದರು. ಇದರಿಂದ ಭಯಭೀತಗೊಂಡ ಗ್ರಾಮಸ್ಥರು ಕೂಲಿ ಕೆಲಸಕ್ಕಾಗಿ ಇತರ ಜಮೀನುಗಳಿಗೆ ತೆರಳುವುದನ್ನು ಘಟನೆಯ ಬಳಿಕ ನಿಲ್ಲಿಸಿ ಗ್ರಾಮದಲ್ಲೇ ಇದ್ದರು. ಸಂಪಾದನೆ ಇಲ್ಲದ ಪರಿಣಾಮ ಜೀವನ ನಡೆಸಲು ತುಂಬಾ ತೊಂದರೆಯಾಗಿತ್ತು. ಜತೆಗೆ ಕೂಲಿ ಕೆಲಸಕ್ಕಾಗಿ ಇತರೆಡೆ ತೆರಳಲು ನಿರ್ಧರಿಸಿದ್ದರು.
ಇದನ್ನು ಮನಗಂಡ ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ಅವರ ಸೂಚನೆಯಂತೆ ಪಿಡಿಒ ಕಿರಣ್ ಅವರು ಗ್ರಾಮಕ್ಕೆ ತೆರಳಿ ನರೇಗಾ ಯೋಜನೆಯಡಿ ಉದ್ಯೋಗ ನೀಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಅಲ್ಲದೆ ಜಾಬ್ ಕಾರ್ಡ್‌ಗಳನ್ನು ಪರಿಶೀಲಿಸಿದ್ದರು. ಈ ವೇಳೆ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಗ್ರಾಪಂ ಕಚೇರಿಗೆ ಆಗಮಿಸಿ ಜಾಬ್ ಕಾರ್ಡ್‌ಗಳನ್ನು ನವೀಕರಿಸಿಕೊಳ್ಳುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದ್ದರು.
ಗುರುವಾರ ಗ್ರಾಪಂ ಕಚೇರಿಗೆ ಆಗಮಿಸಿದ ಮೆಂದಾರೆ ಗ್ರಾಮದ 12 ಜನರಿಗೆ ಅಗತ್ಯ ದಾಖಲೆ ಹಾಗೂ ಕುಟುಂಬಸ್ಥರ ವಿವರವನ್ನು ಪಡೆದು ಜಾಬ್ ಕಾರ್ಡ್ ನವೀಕರಣ ಮಾಡಿಕೊಡಲಾಯಿತು. ಜತೆಗೆ ಇಬ್ಬರಿಗೆ ಹೊಸ ಜಾಬ್ ಕಾರ್ಡ್ ನೀಡಲಾಯಿತು. ಕೂಲಿ ಕೆಲಸಕ್ಕೆ ಆಗಮಿಸುವಂತೆ ಸಲಹೆ ನೀಡಲಾಯಿತು.
ಗಿರಿಜನ ಹಿರಿಯ ಮುಖಂಡ ಮಾದಯ್ಯ ಮಾತನಾಡಿ, ಇಂಡಿಗನತ್ತ ಘಟನೆಯ ಬಳಿಕ ಜಮೀನುಗಳಿಗೆ ಕೂಲಿ ಕೆಲಸಕ್ಕಾಗಿ ಹೋಗುತ್ತಿರಲಿಲ್ಲ. ಇದರಿಂದ ಜೀವನ ನಡೆಸಲು ತುಂಬಾ ತೊಂದರೆಯಾಗಿತ್ತು. ಇದೀಗ ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಕೆರೆ-ಕಟ್ಟೆಗಳಲ್ಲಿ ಕೂಲಿ ಮಾಡುವ ಕೆಲಸ ನೀಡಲು ಭರವಸೆ ನೀಡಿದ್ದು, ಜಾಬ್ ಕಾರ್ಡ್‌ಗಳನ್ನು ನವೀಕರಣ ಮಾಡಿಕೊಟ್ಟಿದ್ದಾರೆ. ಹೀಗಾಗಿ ಪಂಚಾಯಿತಿ ವತಿಯಿಂದ ನೀಡುವ ಕೂಲಿ ಕೆಲಸಕ್ಕೆ ಗ್ರಾಮಸ್ಥರು ಹೋಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಪಿಡಿಒ ಕಿರಣ್ ವಿಜಯವಾಣಿಯೊಂದಿಗೆ ಮಾತನಾಡಿ, ಮೆಂದಾರೆ ಗ್ರಾಮಸ್ಥರಿಗೆ ನರೇಗಾ ಯೋಜನೆಯಡಿ ಕಾಲುವೆ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಕ್ರಿಯಾಯೋಜನೆ ತಯಾರಿಸಿ ಅನುಮತಿ ಪಡೆದ ಬಳಿಕ ಕಾಮಗಾರಿ ಆರಂಭಿಸಿ ಜನರಿಗೆ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು.
ಫೋಟೋ