ಉದ್ಯೋಗಾಧಾರಿತ ಶಿಕ್ಷಣ ಪದ್ಧತಿ ಗಾಂಧಿ ಕನಸು

4 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಲಕ್ಷಾಂತರ ಜನರನ್ನು ಸಂಘಟಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಉದ್ಯೋಗಾಧಾರಿತ ಶಿಕ್ಷಣ ಪದ್ಧತಿಯ ಕನಸು ಹೊಂದಿದ್ದರು ಎಂದು ಹಾವೇರಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯ ಗಿರೀಶ ಪದಕಿ ಹೇಳಿದರು.
ನಗರದ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಗ್ರಾಮೀಣ ಶಿಕ್ಷಕರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಗಾಂಧಿ ಓದು ಮತ್ತು ಗಾಂಧಿ ಕುರಿತ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳು ಪ್ರಬಂಧ ಬರೆಯುವ ಮೂಲಕ ಗಾಂಧೀಜಿ ನೆನಪು ಮಾಡಿಕೊಂಡು ಗಾಂಧಿ ಪ್ರಣಿತ ವಿಚಾರಗಳನ್ನು ಅರಿಯುವುದು ಖುಷಿ ಕೊಡುವ ಸಂಗತಿ. ಸ್ವಚ್ಚತೆ, ಪ್ರಾರ್ಥನೆ ಮತ್ತು ಶಿಕ್ಷಣ ಮೈಗೂಡಿಸಿಕೊಳ್ಳಿ ಎಂದು ದೇಶದ ಜನತೆಗೆ ಹೇಳಿದ್ದ ಗಾಂಧೀಜಿ, ಮೂಲ ಉದ್ಯೋಗ ಶಿಕ್ಷಣವನ್ನೇ ಮಕ್ಕಳಿಗೆ ಕಲಿಸುವುದನ್ನು ಅವರು ಬಲವಾಗಿ ಪ್ರತಿಪಾದಿಸಿದ್ದರು ಎಂದರು.
ಶಂಕರ ಹಲಗತ್ತಿ ಮಾತನಾಡಿ, ಮಕ್ಕಳಿಗಾಗಿ ಮಕ್ಕಳಿಗೆ ಓದುವ ಮತ್ತು ಬರೆಯುವ ಅಭಿರುಚಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು. ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಹೆಚ್ಚು ಬಹುಮಾನ ಪಡೆದಿರುವುದು ಹೆಮ್ಮೆ ಎನಿಸುತ್ತದೆ ಎಂದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲಾಧ್ಯಕ್ಷ ಗುರು ತಿಗಡಿ ಮಾತನಾಡಿ, ಮಕ್ಕಳ ಹಬ್ಬ, ಮಕ್ಕಳ ಸಾಹಿತ್ಯ ಸಂಭ್ರಮ, ಚಿಣ್ಣರ ಮೇಳಗಳನ್ನು ಸಂಘಟಿಸಿ ಶಾಲಾ ಮಕ್ಕಳಲ್ಲಿ ಹೊಸ ಚಿಂತನೆ ಬೆಳೆಸುವಲ್ಲಿ ಸಮಿತಿ ಶ್ರಮಿಸಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪಡೆದ ಶಂಕರ ಹಲಗತ್ತಿ ಅವರಿಗೆ ಸನ್ಮಾನಿಸಲಾಯಿತು. ಸಮಿತಿ ಪದಾಧಿಕಾರಿಗಳಾದ ಎಲ್​.ಐ. ಲಕ್ಕಮ್ಮನವರ, ಶಿವಾನಂದ ಭಜಂತ್ರಿ, ವಿ.ಎನ್​. ಕೀರ್ತಿವತಿ, ವೆಂಕಟೇಶ, ಪಿ.ಎಸ್​. ಅಂಕಲಿ, ಚಂದ್ರಶೇಖರ ತಿಗಡಿ, ಎಂ.ಆರ್​. ಕಬ್ಬೇರ, ಪ್ರಮೀಳಾ ಜಕ್ಕಣ್ಣವರ, ಗಂಗವ್ವ ಕೋಟಿಗೌಡರ, ರುದ್ರೇಶ ಕುರ್ಲಿ, ರವಿಚಂದ್ರನ್​ ದೊಡ್ಡಿಹಾಳ, ಪ್ರೇಮಾ ಪೂಜಾರ, ಭೀಮಪ್ಪ ಕಾಸಾಯಿ, ಎಂ.ಎಸ್​. ಪಾಟೀಲ, ಭಾರತಿ ಸಾಧನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net