

ಮಂಡ್ಯ: ಸಮಾಜದ ಅಂಕುಡೊಂಕನ್ನು ತಿದ್ದಲು, ಬದಲಾಯಿಸಲು ಕಾನೂನುಗಳಿದ್ದರೆ ಸಾಲದು. ಶಿಕ್ಷೆಯ ಭಯ ಹುಟ್ಟಿಸಿ ಮನುಷ್ಯ ತಪ್ಪು ಮಾಡದಂತೆ ನಿಯಂತ್ರಿಸಬಹುದು. ಆದರೆ ಆಧ್ಯಾತ್ಮಿಕ ಪ್ರವಚನ ಮನುಷ್ಯನ ನೈತಿಕ ಪ್ರಜ್ಞೆಯನ್ನು ಜಾಗೃತ ಹಾಗೂ ಮೃದುಗೊಳಿಸಿ ಯಾವುದೇ ತಪ್ಪುಗಳು ನಡೆಯದಂತೆ ನಿಯಂತ್ರಿಸುವ ಶಕ್ತಿ ಹೊಂದಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಭಿಪ್ರಾಯಪಟ್ಟರು
ನಗರದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಶರಣ ಸಾಹಿತ್ಯ ಪರಿಷತ್, ವೀರಶೈವ ವಿದ್ಯಾರ್ಥಿ ನಿಲಯ ಟ್ರಸ್ಟ್, ಜಿಲ್ಲಾ ಬಸವ ಸಮಿತಿ, ಮಂಡ್ಯ ತಾಲೂಕು ಜಗದ್ಗುರು ಬಸವೇಶ್ವರ ಸಹಕಾರ ಸಂಘ, ಕ್ರಾಂತಿಯೋಗಿ ಬಸವೇಶ್ವರ ನೌಕರರ ಪತ್ತಿನ ಸೌಹಾರ್ಧ ಸಹಕಾರಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸಿದ್ದೇಶ್ವರ ಸ್ವಾಮೀಜಿ ಪ್ರವಚನ ಸಾರ ಸಮಾರೋಪ ಸಮಾರಂಭ ಮತ್ತು ಸಾಹಿತಿ ಪ್ರದೀಪ್ಕುಮಾರ್ ಹೆಬ್ರಿ ಅವರ ಜ್ಞಾನಯೋಗಿ ಮಹಾಕಾವ್ಯ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಹೆಬ್ರಿ ಅವರು ಕಳೆದೊಂದು ವರ್ಷದಿಂದ ಪ್ರತಿ ಸೋಮವಾರ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಸಿದ್ದೇಶ್ವರಸ್ವಾಮೀಜಿ ಅವರ ಪ್ರವಚನ ಸಾರದ ಉಪನ್ಯಾಸ ನೀಡುತ್ತಾ ಅದರ ಅಂಶಗಳನ್ನು ’ಜ್ಞಾನಯೋಗಿ’ ಎಂಬ ಮಹಾಕಾವ್ಯವಾಗಿ ರಚಿಸಿರುವುದು ಶ್ಲಾಘನೀಯ. ಸಿದ್ದೇಶ್ವರ ಸ್ವಾಮೀಜಿ ಅವರು ಯಾವುದೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ, ಕಿಚ್ಚು ಹಚ್ಚದೆ, ವ್ಯಕ್ತಿಯೊಬ್ಬ ಪರಿಪೂರ್ಣತೆಯ ಹಾದಿಯಲ್ಲಿ ಸಾಗಿ, ಕುಟುಂಬ, ಸಮಾಜ, ರಾಷ್ಟ್ರ ನಿರ್ಮಾಣವಾಗಬೇಕಾದರೆ ಏನು ಬೇಕೋ ಅದೆಲ್ಲವನ್ನು ತಮ್ಮ ಪ್ರವಚನ, ಚಿಂತನೆ ಮತ್ತು ಬರಹದ ಮೂಲಕ ಕೊಟ್ಟಿದ್ದಾರೆ. ಅವರೊಬ್ಬ ಆಧ್ಯಾತ್ಮಿಕ ಚಿಕಿತ್ಸಕರಾಗಿದ್ದರು. ಅಂತಹವರನ್ನು ಕಳೆದುಕೊಂಡಿದ್ದೇವೆ ಎಂದು ವಿಷಾಧಿಸಿದರು.
ಧಾರ್ಮಿಕ ಜಾತಿ, ಪಂಥ, ಪಂಗಡ, ಸಿದ್ಧಾಂತ ಪ್ರಜ್ಞೆಗಳು ಮನುಷ್ಯನ ಮನಸ್ಸಿನಲ್ಲಿ ಗೋಡೆಗಳನ್ನು ಕಟ್ಟುತ್ತಾ ಹೋಗುತ್ತದೆ. ಅದ್ಭುತವಾದ ಆಲೋಚನಾಶಕ್ತಿ ಚಿಂತನೆಗಳನ್ನು ಇಟ್ಟುಕೊಂಡ ಪರಮಪೂಜ್ಯರು, ಈ ನೆಲದಲ್ಲಿ ಹುಟ್ಟಿ ಆಧ್ಯಾತ್ಮಿಕ ಶಿಖರದಲ್ಲಿ ಮಹಾತ್ಮ ಎನ್ನಿಸಿಕೊಂಡಿದ್ದಾರೆ. ಅದ್ಭುತ ಸಾಧನೆ ಮಾಡಿದ ಇಂತಹವರ ಸಂತತಿ ಹೆಚ್ಚಬೇಕು. ಎಲ್ಲರ ಮನಸ್ಥಿತಿಯನ್ನು ಸುಧಾರಿಸಲು ಆ ಮೂಲಕ ಪರಿಸ್ಥಿತಿಯನ್ನು ಶಾಂತಿಯುತವಾಗಿ ಕಟ್ಟಲು ಅವರ ಪ್ರವಚನಗಳು ಚಿಂತನೆಗಳು ಈ ಕಾಲಕ್ಕೆ ಅಗತ್ಯ ಇದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ವಿದ್ಯಾರ್ಥಿ ನಿಲಯ ಅಧ್ಯಕ್ಷ ಎಂ.ಬಿ.ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಮಹಾಕಾವ್ಯದ ಕರ್ತೃ ಡಾ.ಪ್ರದೀಪಕುಮಾರ ಹೆಬ್ರಿ, ಮೈಷುಗರ್ ನಿವೃತ್ತ ಇಂಜಿನಿಯರ್ ಎಚ್.ಕೆ.ಕೆಂಪಯ್ಯ, ಪದ್ಮಾ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ, ಶಿವಕುಮಾರ ಸ್ವಾಮೀಜಿ ಹಾಗೂ ಸಿದ್ದೇಶ್ವರಸ್ವಾಮೀಜಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.