

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ನೈತಿಕ ಶಿಕ್ಷಣ ಪ್ರಸ್ತುತ ಸಮಾಜಕ್ಕೆ ತುರ್ತು ಅನಿವಾರ್ಯ. ಪುಸ್ತಕಗಳು ಸಾರ್ಥಕ ಬದುಕಿಗೆ ದಾರಿದೀಪ. ಜ್ಞಾನದೀವಿಗೆಯಾದ ಪುಸ್ತಕ ಉತ್ತಮ ಜೀವನ ಸಂಗಾತಿಯಾಗಿದ್ದು, ನೈತಿಕ ಪುಸ್ತಕಗಳಲ್ಲಿರುವ ಲೇಖನ ಸಾರ್ಥಕ ಬದುಕಿಗೆ ಸ್ಫೂರ್ತಿ ಎಂದು ಚಲನಚಿತ್ರ ಸಾಹಿತಿ, ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಹೇಳಿದರು.
ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಮಂಗಳವಾರ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಪ್ರಕಟಿಸಿದ ಜ್ಞಾನಪಥ, ಜ್ಞಾನರಥ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕೆಲವರ್ಷಗಳ ಹಿಂದೆ ಮೂರು ತಿಂಗಳು ಧರ್ಮಸ್ಥಳ, ಸುತ್ತಮುತ್ತಲ ಪ್ರದೇಶದಲ್ಲಿ ವಾಸ್ತವ್ಯ ಇದ್ದು, ಶ್ರೀ ಮಂಜುನಾಥ ಚಲನಚಿತ್ರ ನಿರ್ಮಾಣ ಮಾಡಿರುವ ಸವಿನೆನಪನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ವಿದ್ಯಾರ್ಥಿಗಳು ದೇಶದ ಮುಂದಿನ ಜನಾಂಗವಾಗಿದ್ದು, ಉಜ್ವಲ ಭವಿಷ್ಯ ರೂಪಿಸಲು ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸ್ವಾಮಿ ವಿವೇಕಾನಂದರಂತೆ ಓದಿದ ಪುಸ್ತಕದ ಅನುಭವ ಬದುಕಿನಲ್ಲಿ ಅಳವಡಿಸಿದಾಗ ಜೀವನ ಪಾವನವಾಗುತ್ತದೆ. ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದು ಸಮಾಜದ ಅಮೂಲ್ಯ ಆಸ್ತಿಯಾಗಿ ರೂಪುಗೊಳ್ಳಬೇಕು ಎಂದರು.
ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಚಲನಚಿತ್ರ ನಟ ದತ್ತಣ್ಣ(ದತ್ತಾತ್ರೇಯ ಎಚ್.ಡಿ.), ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.
ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ ನೀಡಲಾಯಿತು. ಶಾರದಾ ಮಣಿಶೇಖರ್ ನೇತೃತ್ವದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರಿಂದ ಸುಶ್ರಾವ್ಯ ಗಾಯನ, ನೃತ್ಯ ಪ್ರದರ್ಶನ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಶಶಿಕಾಂತ ಜೈನ್ ಸ್ವಾಗತಿಸಿದರು. ಪುದುವೆಟ್ಟು ಶಾಲಾ ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರೂಪಿಸಿದರು.
ಮನೆಯ ವಾತಾವರಣದಿಂದಲೇ ಉತ್ತಮ ಸಂಸ್ಕಾರ ಮೂಡಿಬರಬೇಕು. ಜೀವ ದೊಡ್ಡದಲ್ಲ, ಜೀವನ ದೊಡ್ಡದು. ಮೊದಲು ನಾವು ಯಾರು ಎಂಬುದನ್ನು ಅರಿತುಕೊಂಡು, ನವಚೈತನ್ಯ ಹೊಂದಬೇಕು. ಸಜ್ಜನರ ಸತ್ಸಂಗ, ಉತ್ತಮ ಪುಸ್ತಕ ಓದುವುದರಿಂದ ಮಾನವೀಯ ಮೌಲ್ಯಗಳೊಂದಿಗೆ ಉತ್ತಮ ಸಂಸ್ಕಾರ ಮೂಡಿಬರುತ್ತದೆ. ದತ್ತಣ್ಣ, ಚಲನಚಿತ್ರ ನಟ 31 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ನೈತಿಕ ಶಿಕ್ಷಣ ಕಾರ್ಯಕ್ರಮ ಬಳಿಕ ಇಲ್ಲಿನ ಯಶಸ್ಸು ಕಂಡು ಇತರ ತಾಲೂಕಿಗೂ ವಿಸ್ತರಿಸಲು ಸರ್ಕಾರ ಮನವಿ ಮಾಡಿತ್ತು. ಇದರಿಂದ ಇದುವರೆಗೆ 4,180 ಶಿಕ್ಷಕರಿಗೆ ತರಬೇತಿ ನೀಡಿದ್ದು, 4,00,098 ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಒಟ್ಟು 54 ಪುಸ್ತಕಗಳನ್ನು ಪ್ರಕಟ ಮಾಡಿದ್ದು, 24,23,000 ಪುಸ್ತಕಗಳನ್ನು ವಿತರಿಸಲಾಗಿದೆ. ಡಾ.ಶಶಿಕಾಂತ್ ಐ., ನಿರ್ದೇಶಕರು, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ಧರ್ಮಸ್ಥಳ
*ಎಂಎನ್‌ಜಿ- ಶಾಂತಿವನ