

ಬೆಳ್ತಂಗಡಿ: ನೀರು ಅತಿ ಅಮೂಲ್ಯವಾದ ಸಂಪತ್ತಾಗಿದ್ದು, ನಮ್ಮ ಆರೋಗ್ಯ ಕಾಪಾಡಲು ಪ್ರಕೃತಿ ನೀಡಿದ ಕೊಡುಗೆಯಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀ.ಹೆಗ್ಗಡೆಯವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ರಾಜ್ಯಾದ್ಯಂತ ಶುದ್ಧಗಂಗಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೇರಕರಿಗೆ ಮಾರ್ಗದರ್ಶನ ನೀಡುತ್ತಾ ಶ್ರೀ ಕ್ಷೇತ್ರದ ಧರ್ಮಸ್ಥಳದ ಚರ್ತುದಾನಗಳಲ್ಲಿ ಔಷಧ ದಾನವೂ ಒಂದು. ಶುದ್ಧನೀರು ಮನುಷ್ಯನಿಗೆ ಆರೋಗ್ಯಯುತವಾಗಿರಲು ಪ್ರಕೃತಿ ನೀಡಿದ ಕೊಡುಗೆಯಾಗಿದ್ದು, ನೀರು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಜನ ಸಾಮಾನ್ಯರು ಪರಿಶುದ್ಧ ನೀರನ್ನು ಸೇವಿಸದೆ ಪ್ಲೋರೈಡ್, ಕ್ಲೋರೈಡ್‌ನಿಂದ ಕೂಡಿದ ನೀರನ್ನು ಕುಡಿಯುವುದರಿಂದ ಮಹಿಳೆಯರ ಮತ್ತು ಮಕ್ಕಳ ಮೇಲೆ ಆಗುತ್ತಿರುವ ಅನಾರೋಗ್ಯ ಸಮಸ್ಯೆ ಮನಗಂಡು ಎಲ್ಲಿ ನೋವಿದೆಯೋ ಅಲ್ಲಿ ಔಷಧಿ ನೀಡಬೇಕೆಂದು ಶುದ್ಧ ನೀರಿನ ಸಮಸ್ಯೆ ಇರುವಲ್ಲಿ ಯೋಜನೆ ಮೂಲಕ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ ಎಂದರು.
ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಮಾತನಾಡಿ ಯೋಜನೆಯು ಶ್ರೀ ಕ್ಷೇತ್ರದ ಅನೇಕ ಸೇವೆ ಸಮಾಜದ ಜನ ಸಾಮಾನ್ಯರಿಗೆ ನೀಡುತ್ತಾ ಬಂದಿದೆ. ಇದರ ನಿರಂತರತೆ ಕಾಯ್ದುಕೊಂಡು ನಮ್ಮ ಕೆಲಸ ಸದಾ ಸೇವಾ ಮನೋಭಾವನೆಯಿಂದ ಮಾದರಿಯಾಗಿ ಶ್ರೇಷ್ಠತೆ ಉಳಿಸಿಕೊಂಡು ಮಾಡಿದರೆ ಅದು ಭಗವಂತನ ಸೇವೆ ಆಗುತ್ತದೆ. ಇದರಿಂದ ಸೇವೆಯ ಮೌಲ್ಯ ಹೆಚ್ಚುತ್ತದೆ ಎಂದರು.
ಬೆಳ್ತಂಗಡಿ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ನಡೆದ ಪ್ರೇರಕರ ಪ್ರೇರಣಾ ಕಾರ್ಯಗಾರದಲ್ಲಿ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ವಿಭಾಗದ ನಿರ್ದೇಶಕ ಶಿವಾನಂದ ಆಚಾರ್ಯ, ಯೋಜನಾಧಿಕಾರಿ ಯುವರಾಜ್ ಜೈನ್, ಬೆಳ್ತಂಗಡಿ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಅಧಿಕಾರಿ ವರ್ಗದವರುವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆ ಸಮುದಾಯ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅನೇಕ ಜನಪರ ಕಾರ್ಯಕ್ರಮ ಅನುಷ್ಠಾನ ಮಾಡಿದ್ದು, ಅವುಗಳಲ್ಲಿ ಶುದ್ಧ ಗಂಗಾ ಕಾರ್ಯಕ್ರಮವೂ ಒಂದು. ಜನ ಸಾಮಾನ್ಯರು ಶುದ್ಧ ನೀರನ್ನು ಬಳಸಿ ಆರೋಗ್ಯ ಪೂರ್ಣ ಜೀವನ ನಡೆಸುವ ಉದ್ದೇಶದಿಂದ ಆರಂಭಗೊಂಡ ಶುದ್ಧ ಗಂಗಾ ಕಾರ್ಯಕ್ರಮದಲ್ಲಿ ಶುದ್ಧ ನೀರಿನ ಸಮಸ್ಯೆ ಇರುವ ರಾಜ್ಯದ ವಿವಿಧ ಗ್ರಾಮಗಳಲ್ಲಿ 2009ರಿಂದ ಇದುವರೆಗೆ ಒಟ್ಟು 457 ಶುದ್ಧ ಗಂಗಾ ಘಟಕಗಳನ್ನು ಸ್ಥಳೀಯಾಡಳಿತದ ಸಹಭಾಗಿತ್ವದಲ್ಲಿ ಆರಂಭಿಸಿ ಪ್ರತಿನಿತ್ಯ 5.91 ಲಕ್ಷ ಜನರಿಗೆ ಶುದ್ಧ ನೀರನ್ನು ಒದಗಿಸುತ್ತಿದೆ.