ಮೇಲ್ನೋಟಕ್ಕೆ ಕಾಣುವುದೆಲ್ಲ ಸತ್ಯವಲ್ಲ...

Mandalothsava 1
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಅಭಿಮತ

ಜನ್ಮಾಷ್ಟಮಿ ಮಂಡಲೋತ್ಸವದಲ್ಲಿ ಆಶೀರ್ವಚನ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಮಾಜದಲ್ಲಿ ಇಂದು ಸತ್ಯ ಮರೆಮಾಚಿ ಜನರನ್ನು ತಪ್ಪು ಮಾರ್ಗಕ್ಕೆ ಕೊಂಡೊಯ್ಯುವ ವ್ಯವಸ್ಥಿತ ಯೋಜನೆ, ಜಾಲ ಹೆಚ್ಚುತ್ತಿದೆ. ಜನರಲ್ಲಿ ಚಿಂತನಾ ಅಥವಾ ವಿಮರ್ಶಾ ಗುಣ ಇಲ್ಲದಿರುವುದೇ ಇದಕ್ಕೆ ಕಾರಣ. ಮೇಲ್ನೋಟಕ್ಕೆ ಕಾಣುವುದೆಲ್ಲ ಸತ್ಯವಲ್ಲ. ಅದು ಘಟನೆಗಳ ಸುರುಳಿಯೊಳಗೆ ಅಥವಾ ಸುಳಿಯೊಳಗೆ ಇರುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ರಾಜಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ನಡೆಯುತ್ತಿರುವ 48 ದಿನಗಳ ಮಂಡಲೋತ್ಸವದ ಕಾರ್ಯಕ್ರಮದಲ್ಲಿ ಆಗಸ್ಟ್​ 31ರಂದು ಸಂಜೆ ಆಯೋಜಿಸಿದ್ದ ಜ್ಞಾನಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

ಜನರ ಯೋಚನಾ ಶಕ್ತಿ ಕ್ಷೀಣ

333
ಮೊಬೈಲ್​ ಬಂದ ಬಳಿಕವಂತೂ ಜನರೆಲ್ಲ ಭ್ರಮಾ ಪ್ರಪಂಚದಲ್ಲಿ ಮುಳುಗಿದ್ದಾರೆ. ಯೋಚನೆ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಜನರಿಗೆ ಕೇಳುವ ಇಚ್ಛೆ, ತಾಳ್ಮೆ, ಏಕಾಗ್ರತೆ ಇಲ್ಲ. ಕಣ್ಣೆದುರಿಗೆ ಕಂಡಿದ್ದನ್ನೇ ಸತ್ಯ ಎಂದು ಭಾವಿಸಿಕೊಳ್ಳುತ್ತಾರೆ. ಹೀಗಾಗಿ ಸುಳ್ಳುಗಳ ಬಲೆಯೊಳಗೆ ಸಿಲುಕಿರುವ ಸತ್ಯ ಬಿಂಬಿಸುವವರು ಬೇಕಿದೆ. ಸತ್ಯ ಪ್ರತಿಪಾದಕರು ಅಗತ್ಯತೆ ಇಂದು ಅತಿ ಹೆಚ್ಚಿದೆ. ಸರಿಯಾದ ನಿರ್ಧಾರ, ಎಲ್ಲವುಗಳ ವಿಮರ್ಶೆ ಮಾಡುವುದೇ ನಿಜವಾದ ಜೀವನವಾಗಿದೆ ಎಂದು ಸುಗುಣೇಂದ್ರ ಶ್ರೀ ತಿಳಿಸಿದರು.

ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಮಠದ ದಿವಾನ ನಾಗರಾಜ ಆಚಾರ್ಯ, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ಮಠದ ವಿದ್ವಾಂಸ ಡಾ. ಬಿ.ಗೋಪಾಲ ಆಚಾರ್ಯ ಉಪಸ್ಥಿತರಿದ್ದರು.

ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಧರ್ಮಸ್ಥಳದ ಪ್ರಕರಣದ ಕುರಿತಾಗಿ ಅಜಿತ್​ ಹನುಮಕ್ಕನವರ್​ ಅವರು ಮಾಧ್ಯಮದ ಮೂಲಕ ಸತ್ಯ ಅನಾವರಣಗೊಳಿಸಿದ್ದಾರೆ. ಅವರ ಪ್ರವೇಶದಿಂದಾಗಿ ಜನರಿಗೆ ಸತ್ಯದ ಅರಿವು ಮೂಡಿದೆ. ಇಲ್ಲದಿದ್ದಲ್ಲಿ ಎಡಪಂಥೀಯರು, ಎಡಬಿಡಂಗಿಗಳು ಸತ್ಯ ಮರೆಮಾಚಿಸಿ, ಅಸತ್ಯಗಳ ವಿಜೃಂಭಣೆಯನ್ನು ಇನ್ನೂ ಹೆಚ್ಚಿಸುತ್ತಿದ್ದರು. | ಸುಗುಣೇಂದ್ರ ಶ್ರೀ. ಪುತ್ತಿಗೆ ಮಠ

ಜಾಗೃತಿಗಾಗಿ ಜಾಂಬವಂತ ಬರಬೇಕು

222
ಜ್ಞಾನ ಮಂಡಲೋತ್ಸವದ ಸಭೆಯಲ್ಲಿ ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರ-ರಾಜಕೀಯ ಹಸ್ತಕ್ಷೇಪ ಕುರಿತು ಸುವರ್ಣ ವಾಹಿನಿಯ ಸಂಪಾದಕ ಅಜಿತ್​ ಹನುಮಕ್ಕನವರ್​ ಉಪನ್ಯಾಸ ನೀಡಿದರು. ಚಾಮುಂಡಿ ಬೆಟ್ಟ ಹಿಂದುಗಳದ್ದಲ್ಲ ಎಂಬ ಫರ್ಮಾನು ಹೊರಡಿಸಲಾಗಿದೆ. ನಿನ್ನೆ ಇಲ್ಲಿಗೆ ಡಿಸಿಎಂ ಡಿ.ಕೆ. ಶಿವಕುಮಾರ ಬಂದಿದ್ದರು. ಅವರ ಬಳಿ ಉಡುಪಿ ಮಠ ಯಾರಿಗೆ ಸೇರಿದ್ದು ಎಂದು ಪ್ರಶ್ನಿಸಬೇಕಿತ್ತು. ಕಳೆದುಕೊಂಡಿದ್ದ ಅಯೋಧ್ಯೆಯನ್ನು ಮರಳಿ ಪಡೆಯಲು 497 ವರ್ಷ ಹೋರಾಡಬೇಕಾಯಿತು. ಆದರೆ, ಈಗಿರುವ ನಮ್ಮ ಸ್ವತ್ತು, ಸಂಸ್ಕೃತಿ ಉಳಿಸಿಕೊಳ್ಳುವುದು ಹೇಗೆ? ಅದಕ್ಕೆ ನಾವೇನು ಮಾಡಬೇಕು ಎಂಬ ಚಿಂತನೆ ಬೇಕಿದೆ. ನಮ್ಮ ಮನಸ್ಸಿನೊಳಗಿರುವ ಮೂರ್ತಿ ಒಡೆಯುವ ಪ್ರಯತ್ನ ಈಗ ನಡೆದಿದೆ. ಅದಕ್ಕೆ ಧರ್ಮಸ್ಥಳ ಪ್ರಕರಣ ಸಾಕ್ಷಿ. ಜನರ ಮನಸ್ಸೊಡೆಯುವ ಕಾರ್ಯಕ್ಕೆ 13 ವರ್ಷ ಬೇಕಾಯಿತು. ಎಡಪಂಥೀಯರಿಗೆ ನಿರ್ದಿಷ್ಟ ಗುರಿ ಇದೆ. ಧರ್ಮ ಅಂದರೆ ಅಫೀಮು ಎಂಬ ಸ್ಪಷ್ಟತೆ ಅವರಿಗಿದೆ. ಆದರೆ, ನಮ್ಮ ಗುರಿ ಏನು? ಗಾಳಿ ಬೀಸಿದೆಡೆ ಸಾಗುವುದು ನಮ್ಮ ಜೀವನದ ಗುರಿಯೇ? ಯಾವನೋ ಒಬ್ಬ ಬಂದು ಎಐ ವಿಡಿಯೋ ಮಾಡಿ, ತರ್ಕಕ್ಕೆ ನಿಲುಕದ ವಿಷಯ ಹೇಳಿದಾಗ ಎಲ್ಲರೂ ಸತ್ಯ ಎಂದು ನಂಬಿದೆವಲ್ಲ? ಆತ ಹೇಳಿದ್ದು ಹಸಿ ಸುಳ್ಳು ಎಂಬ ಆಲೋಚನಾ ಶಕ್ತಿ ಸಮಾಜಕ್ಕೆ ಇಲ್ಲದಾಯಿತಲ್ಲ? ಚಿಕಿತ್ಸಕ ಬುದ್ಧಿ ಕಳೆದುಕೊಂಡ ಸಮಾಜ ದುಷ್​ಪ್ರಚಾರಕ್ಕೆ ಬಲಿಯಾಯಿತಲ್ಲ? ಹೀಗಾಗಿ ನಮ್ಮ ಶಕ್ತಿ ಏನೆಂದು ತಿಳಿಸಲು ರಾಮಾಯಣದಲ್ಲಿ ಸೀತಾನ್ವೇಷಣೆಗಾಗಿ ಸಮುದ್ರ ಹಾರಲು ಆಗದೆ ಚಿಂತಾಕ್ರಾಂತನಾಗಿ ಕುಳಿತಿದ್ದ ಹನುಮಿಗೆ ಆತನ ಶಕ್ತಿ ಕುರಿತು ಜಾಗೃತಿ ಮೂಡಿಸಿದ ಜಾಂಬವಂತನ ರೀತಿಯವರು ಬರಬೇಕು ಎಂದು ಹನುಮಕ್ಕನವರ್​ ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net