ಜಿಲೇಬಿ ಸೇವೆಗೆ ಮುಂದಾದ ಗೆಳಯರ ಬಳಗ

Published on

ಸಿಂಧನೂರು: ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ತಾಲೂಕಿನಿಂದ ಒಂದಿಲ್ಲೊಂದು ಗುಪ್ತ ಸೇವೆ ನಡೆದಿರುತ್ತದೆ. ಕಳೆದ ಎರಡು ವರ್ಷ 8 ಲಕ್ಷ ಶೇಂಗಾ ಹೊಳಿಗೆ ಸೇವೆ ಮೂಲಕ ಸುದ್ದಿಯಾಗಿದ್ದ ಸಿಂಧನೂರು ವಿಜಯಕುಮಾರ ಗುಡಿಹಾಳ ನೇತೃತ್ವದ ಗೆಳೆಯರ ಬಳಗ ಈಗ ಮತ್ತೊಂದು ಸೇವೆಗೆ ಮುಂದಾಗಿದ್ದು, ಜಾತ್ರೆಗೆ ಬರುವ ಭಕ್ತರಿಗೆ ಜೀಲೆಬಿ ಸವಿಯುಣಿಸಲು ಸಿದ್ಧತೆ ಕೈಗೊಂಡಿದೆ.

ಹತ್ತು ವರ್ಷದಿಂದ ಈ ಅಳಿಲು ಸೇವೆ ಮಾಡುತ್ತಿರುವ ಗೆಳೆಯರ ಬಳಗ, ಒಂದು ಬಾರಿ 20 ಲಕ್ಷಕ್ಕಿಂತ ಹೆಚ್ಚು ಮಿರ್ಚಿ, ಎರಡು ವರ್ಷ 8 ಲಕ್ಷ ಶೇಂಗಾ ಹೊಳಿಗೆ ಸಮರ್ಪಿಸಿದ್ದರು. ಯಾವುದೇ ಪ್ರಚಾರ ಇಲ್ಲದೆ ಭಕ್ತಿ ಸೇವೆಗೆ ಮುಂದಾಗಿದೆ. ಪ್ರಸ್ತುತ ಜಾತ್ರೆಗೆ ಬರುವ ಭಕ್ತರಿಗೆ ಬರೊಬ್ಬರಿ 12ಲಕ್ಷ ಪೀಸ್ ಜೀಲಾಬಿ ಸೇವೆ ನೀಡಲು ಸಿದ್ಧತೆ ನಡೆಸುತ್ತಿದೆ.

ಜ.10ರಿಂದ ಈ ಮಹತ್ವ ಕಾರ್ಯಕ್ಕೆ ಅಣಿಯಾಗಲಿದ್ದು, 120 ಜನ ಬಾಣಿಸಿಗರು, 200 ಸಹಾಯಕರೊಂದಿಗೆ 12ಲಕ್ಷ ಪೀಸ್ ಜಿಲೇಬಿ ತಯಾರಿಸಲಾಗುವುದು. 50ಕ್ವಿಂಟಾಲ್ ಮೈದಾ, 120 ಕ್ವಿಂಟಾಲ್‌ಬೆಲ್ಲ, 10ಬ್ಯಾರಲ್ ಅಡುಗೆ ಎಣ್ಣೆ, 1.5ಕ್ವಿಂಟಾಲ್ ಮೊಸರು ಹಾಗೂ 10ಡಬ್ಬಿ ತುಪ್ಪ ಸಿದ್ಧತೆ ಮಾಡಿಕೊಂಡಿದ್ದು ನಾಲ್ಕು ದಿನಗಳ ಕಾಲ ಜಿಲಾಬಿ ತಯಾರಿಸುವ ಕಾರ್ಯ ನಡೆಯಲಿದೆ.

ಗವಿಶ್ರೀಗಳ ಆಶಯವನ್ನೇ ಸಿಂಧನೂರು ಗೆಳೆಯರ ಬಳಗ ಹೊಂದಿದ್ದು, ತಮ್ಮ ಸೇವೆ ಶ್ರೀಮಠಕ್ಕೆ ಬರುವ ಭಕ್ತರಿಗೆ ಅರ್ಪಣೆಯಾದರೆ ಅದುವೇ ಸುದೈವ ಎಂದು ನಂಬಿದ್ದಾರೆ. ಈ ಕಾರ್ಯಕ್ಕೆ ಎಲ್ಲ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಾಡಿನಲ್ಲಿ ಕೊಪ್ಪಳ ಗವಿಮಠ ಪ್ರಖ್ಯಾತಿ ಪಡೆದಿದೆ. ವರ್ಷದಿಂದ ವರ್ಷಕ್ಕೆ ಜಾತ್ರೆಗೆ ರಾಜ್ಯವಷ್ಟೇ ಅಲ್ಲದೆ ಇತರ ಭಾಗದಿಂದಲೂ ಅಪಾರ ಪ್ರಮಾಣದ ಭಕ್ತರು ಆಗಮಿಸುತ್ತಿದ್ದಾರೆ. ಶ್ರೀಗಳು ಕೂಡ ಎಲ್ಲ ಭಕ್ತರಿಗೆ ದಾಸೋಹ ನೀಡುತ್ತಿದ್ದಾರೆ. ನಮ್ಮ ಗೆಳೆಯರ ಬಳಗ ಸಣ್ಣ ಅಳಿಲು ಸೇವೆಗೆ ಮುಂದಾಗಿದೆ. ನಮಗೆ ಯಾವುದೇ ಪ್ರಚಾರ ಬೇಡ. ನಮ್ಮದು ಅಳಿಲು ಸೇವೆ. ಜಾತ್ರೆ ಸೌಭಾಗ್ಯವನ್ನು ನಾವೆಲ್ಲ ಕಣ್ತುಂಬಿಕೊಳ್ಳೊಣ. ವಿಜಯಕುಮಾರ ಗುಡಿಹಾಳ ಕೊಪ್ಪಳ ಗವಿಮಠದ ಭಕ್ತ ಸಿಂಧನೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net