

ಬೆಳಗಾವಿ:ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಪತ್ನಿ ಉಮಾ ಪದ್ಮಣ್ಣವರ ಸೇರಿದಂತೆ ನಾಲ್ವರು ಆರೋಪಿಗಳಿಗೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಬೆಳಗಾವಿ ಎರಡನೇ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಪಂಕಜಾ ಕೊನ್ನೂರ ಆದೇಶ ಹೊರಡಿಸಿದರು.
ಅ.16ರಂದು ಕೊಲೆಯಾದ ಸಂತೋಷ ಪತ್ನಿ ಉಮಾ ಪದ್ಮಣ್ಣವರ, ಶೋಭಿತ್ ಗೌಡ, ಪವನ ರಾಮನಕುಟ್ಟಿ ಅವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಅಲ್ಲದೆ ಅ.21 ರಂದು ಇನ್ನೋರ್ವ ಆರೋಪಿ ಮಂಜುನಾಥ ತೇರ್ಕಲ್ ಸೋಮವಾರ ರಾತ್ರಿ ಬಂಧಿಸಿದ್ದು ಎಲ್ಲ ಆರೋಪಿಗಳನ್ನು ಹೆಚ್ಚುವರಿ ತನಿಖೆಗಾಗಿ ಮಾಳಮಾರುತಿ ಪೊಲೀಸರು ಅ.22 ರಿಂದ ಅ.25ರ ವರೆಗೆ ಪೊಲೀಸ್ ಕಸ್ಟಡಿಗೆ ವಹಿಸುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ಮಂಜುನಾಥ ತೇರ್ಕಲ್ ಸಂತೋಷ ಪದ್ಮಣ್ಣವರ ಕೊಲೆ ಮಾಡಲು ಮಾತ್ರೆ ಇಂಜೆಕ್ಷನ್ ತಂದು ಉಮಾಗೆ ನೀಡಿದ್ದ. ಕೊಲೆಯಾದಾಗಿನಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಮಂಜುನಾಥ್ ನನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಉಮಾ ಸೇರಿದಂತೆ ನಾಲ್ವರು ಆರೋಪಿಗಳು ಈಗ ಪೊಲೀಸ್ ಕಸ್ಟಡಿಗೆ ಮಾಳಮಾರುತಿ ಪೊಲೀಸರು ತೆಗೆದುಕೊಂಡು ವಿಚಾರಣೆ ನಡೆಸಲಿದ್ದಾರೆ.