

ಚಿಕ್ಕಮಗಳೂರು: ಜಲಜೀವನ್ ಮಿಷನ್ ಕಾಮಗಾರಿ ಕೈ ತುಂಬಾ ಕೆಲಸ ಹಾಗೂ ಜೇಬು ತುಂಬಾ ಹಣ ಎನ್ನುವಂತಾಗಿದೆ. ಕಂಟ್ರಾಕ್ಟರ್ ಗೆ ಕೆಲಸ ನೀಡಲು ಯೋಜನೆ ಎನ್ನುವಂತಾಗಿದೆ. ಆದರೆ ಇದು ಜನರಿಗೆ ಅನುಕೂಲವಾಗುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜೆಜೆಎಂ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನೀರಿನ ಮೂಲಗಳು ಇಲ್ಲದಿದ್ದರೂ ಪೈಪ್ ಲೈನ್ ಕಾಮಗಾರಿ ನಡೆಸಿ ಮನೆಮನೆಗಳಿಗೆ ನಲ್ಲಿ ಅಳವಡಿಕೆ ಮಾಡಲಾಗಿದೆ. ಇಂತಹ ಕಾಮಗಾರಿ ಎಲ್ಲೆಲ್ಲಿ ಆಗಿದೆ ಅವುಗಳನ್ನು ಗುರುತಿಸಬೇಕು ಎಂದು ಹೇಳಿದರು.
ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಕೆ.ಜೆ.ಜಾರ್ಜ್ ನೀರಿನ ಮೂಲವಿಲ್ಲದೆ ಪೈಪ್ ಲೈನ್ ಕಾಮಗಾರಿ ನಡೆಸುವುದು ಸರಿಯಲ್ಲ. ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತ ಯಂತ್ರಧಾರೆ ಕೇಂದ್ರಗಳಿAದ ಕೃಷಿ ಯಂತ್ರೋಪಕರಣಗಳು ಮಾಯವಾಗಿವೆ. ಹಲವು ಕೇಂದ್ರಗಳು ಈಗಾಗಲೇ ಬಾಗಿಲು ಮುಚ್ಚಿಕೊಂಡಿವೆ. ಈ ಬಗ್ಗೆ ಕನಿಕ ತಂಡ ರಚನೆ ಮಾಡಿ ಕೃಷಿ ಯಂತ್ರೋಪಕರಣಗಳು ಎಲ್ಲಿ ಹೋಗಿವೆ ಎಂದು ಪತ್ತೆ ಮಾಡಬೇಕು ಎಂದು ಸಿ.ಟಿ.ರವಿ ಸಭೆಯಲ್ಲಿ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆ.ಜೆ.ಜಾರ್ಜ್, ಮುಂದಿನ ಪ್ರಗತಿ ಪರಿಶೀಲನ ಸಭೆಯ ಒಳಗಾಗಿ ಪ್ರತಿಯೊಂದು ಕೃಷಿ ಯಂತ್ರಧಾರೆ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಯಂತ್ರೋಪಕರಣಗಳ ಪರಿಶೀಲನೆ ನಡೆಸಬೇಕು. ಕೃಷಿ ಯಂತ್ರಧಾರೆ ಕೇಂದ್ರಗಳ ಟೆಂಡರ್ ಪಡೆದು ಯಾರು ಸರಿಯಾಗಿ ನಡೆಸುತ್ತಿಲ್ಲವೋ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ ಅವರಿಗೆ ಸೂಚಿಸಿದರು.
ಜಿಲ್ಲಾ ಕೇಂದ್ರದಲ್ಲಿ ಒಂದೇ ಮಣ್ಣು ಪರೀಕ್ಷಾ ಕೇಂದ್ರವಿದೆ. ಹೀಗಾಗಿ ಎಲ್ಲಾ ರೈತರ ಜಮೀನಿನ ಮಣ್ಣಿನ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಇದರಿಂದ ಮಣ್ಣಿಗೆ ಯಾವ ರಾಸಾಯನಿಕ ಗೊಬ್ಬರ ಬಳಸಬೇಕು ಎಂಬುದು ತಿಳಿಯುವುದಿಲ್ಲ. ಹೀಗಾಗಿ ಹೋಬಳಿ ಮಟ್ಟದಲ್ಲಿ ಒಂದು ಮಣ್ಣು ಪರೀಕ್ಷಾ ಕೇಂದ್ರ ಆರಂಭ ಮಾಡಬೇಕು. ಮಣ್ಣಿಗೆ ಅಗತ್ಯವಿಲ್ಲದ ಗೊಬ್ಬರವನ್ನು ಬಳಸಿದಲ್ಲಿ ಅದು ನೀರಿನೊಂದಿಗೆ ಸೇರಿ ಜಲಮೂಲಗಳಲ್ಲಿ ಸಂಗ್ರಹಗೊಳ್ಳುತ್ತದೆ. ಆಗ ನಾವು ಕುಡಿಯುವ ನೀರಿನಲ್ಲಿಯೂ ಅಲ್ಯೂಮಿನಿಯಂ ಅಂಶ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆ.ಜೆ.ಜಾರ್ಜ್ ಅವರು, ಪ್ರತಿ ಹೋಬಳಿ ಮಟ್ಟದಲ್ಲಿಯೂ ಮಣ್ಣು ಪರೀಕ್ಷಾ ಕೇಂದ್ರ ಆರಂಭಿಸಲು ಸಾಧ್ಯವಿದೆಯೇ ಎಂದು ಜಂಟಿ ಕೃಷಿ ನಿರ್ದೇಶಕ ಸುಜಾತ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸುಜಾತ ಸಂಚಾರಿ ಮಣ್ಣು ಪರೀಕ್ಷಾ ಕೇಂದ್ರವನ್ನು ಆರಂಭ ಮಾಡಲು ಶೀಘ್ರವೇ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಜಿ.ಎಚ್.ಶ್ರೀನಿವಾಸ್, ಎಚ್.ಡಿ.ತಮ್ಮಯ್ಯ, ಕೆ.ಎಸ್.ಆನಂದ್, ನಯನಾ ಮೋಟಮ್ಮ, ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ, ಡಿಸಿ ಮೀನಾ ನಾಗರಾಜ್, ಎಸ್‌ಪಿ ವಿಕ್ರಮ ಅಮಟೆ, ಜಿಪಂ ಸಿಇಒ ಡಾ.ಗೋಪಾಲಕೃಷ್ಣ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.