

ಮುಳಬಾಗಿಲು: ಪ್ರಧಾನ ಮಂತ್ರಿ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಗ್ರಾಮದ ಪ್ರತಿಮನೆಗೆ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಹಂತ ಹಂತವಾಗಿ ಅನುಷ್ಠ್ಠಾನಕ್ಕೆ ತರಲಾಗುವುದು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ಹೇಳಿದರು.
ಜೆಜೆಎಂ ಯೋಜನೆಯಡಿ ಮನೆ ಮನೆಗೆ ನೀರು ಸರಬರಾಜು ಮಾಡುವ ಹಿನ್ನೆಲೆಯಲ್ಲಿ ತಾಲೂಕಿನ ದೇವರಾಯಸಮುದ್ರ ಗ್ರಾಪಂ ವ್ಯಾಪ್ತಿಯ ಕಾಮನೂರು ಗ್ರಾಮದಲ್ಲಿ ಬುಧವಾರ ಪೈಪ್ಲೈನ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ಯೋಜನೆಯಲ್ಲಿ ಮನೆಗಳಿಗೆ ನೀರು ಪೂರೈಕೆ ಬೇಡಿಕೆ ಎಷ್ಟಿದೆ ಎಂಬುದನ್ನು ಅಳೆಯಲು ಮೀಟರ್ ಅಳವಡಿಸಲಾಗುತ್ತಿದೆ. ಇದನ್ನು ಕಾಂಗ್ರೆಸ್ನವರು ವಿರೋಧಿಸುವ ಉದ್ದೇಶದಿಂದ ನೀರಿಗೆ ಮೀಟರ್ ದರ ವಿಧಿಸುತ್ತಾರೆ ಎಂಬ ಅಪಪ್ರಚಾರ ಮಾಡುತ್ತಿದ್ದು, ಅದಕ್ಕೆ ಮಾನ್ಯತೆ ನೀಡಬಾರದು. ಈ ಹಿಂದೆ ಎಷ್ಟು ನೀರಿನ ದರ ಪಾವತಿ ಮಾಡುತ್ತಿದ್ದರು ಅಷ್ಟೇ ಶುಲ್ಕ ಈಗಲೂ ಪಾವತಿ ಮಾಡಿದರೆ ಸಾಕು ಎಂದರು.
ತಾಪಂ ಮಾಜಿ ಅಧ್ಯಕ್ಷ ವಿ.ರಘುಪತಿರೆಡ್ಡಿ, ತಾಪಂ ಮಾಜಿ ಸದಸ್ಯ ಡಾ.ಸಿ.ಎನ್. ಪ್ರಕಾಶ್, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಂ.ಆರ್.ನಾಗಭೂಷಣ್ಬಾಬು, ಪಿಡಿಒ ಎಸ್.ರಮೇಶ್, ಮುಖಂಡರಾದ ಕೆ.ಎಂ.ಅಶ್ವತ್ಥಗೌಡ, ಕೆ.ಎಂ.ಸಂಜೀವಗೌಡ, ರವೀಂದ್ರ, ಶಿವ, ಕಮ್ಮದಟ್ಟಿ ನಾರಾಯಣಸ್ವಾಮಿ ಇದ್ದರು.