ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

20mnv01
ಮಾನ್ವಿಯ ಪ್ರವಾಸಿ ಮಂದಿರದಲ್ಲಿ ಸಚಿವ ಎನ್.ಎಸ್.ಬೋಸರಾಜು ಶನಿವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ತಾಪಂ ಇಒ ಖಾಲೀದ್ ಅಹಮ್ಮದ್, ಮುಖ್ಯಾಧಿಕಾರಿ ಪರಶುರಾಮ್ ದೇವಮಾನೆ, ನೀರಾವರಿ ಇಲಾಖೆ ಎಇಇ ವಿಜಯಲಕ್ಷ್ಮೀ ಇತರರಿದ್ದರು.
Published on

ಮಾನ್ವಿ: ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಕೈಗೊಂಡಿರುವ ಕುಡಿವ ನೀರಿನ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಸೂಚಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಬೇಕು.

ವಸತಿ ರಹಿತ ಕುಟುಂಬಗಳನ್ನು ಗುರುತಿಸಿ ಅವರಿಗೆ ವಸತಿ ಯೋಜನೆಗಳ ಅಡಿ ಮನೆ ಹಂಚಿಕೆ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಫಲಾನುಭವಿಗಳ ಅಂತಿಮ ಪಟ್ಟಿ ತಯಾರಿಸಬೇಕು ಎಂದು ತಾಪಂ ಇಒ ಖಾಲೀದ್ ಅಹಮ್ಮದ್‌ಗೆ ಸೂಚಿಸಿದರು.

ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಸಮರ್ಪಕವಾಗಿ ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಜೆಜೆಎಂ ಹಾಗೂ ಅಮೃತ್-2 ಕುಡಿವ ನೀರಿನ ಯೋಜನೆಗಳ ಕಾಮಗಾರಿ ಸರಿಯಾಗಿ ಮಾಡಬೇಕು. ಮುಖ್ಯರಸ್ತೆ ಹಾಗೂ ರಾಜ ಕಾಲುವೆಗಳಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ದೇವಮಾನೆಗೆ ತಿಳಿಸಿದರು.

ಕೃಷಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ಬಾರಿ ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಬೇಗ ನೀರು ಹರಿಸಸಲಾಗಿದೆ. ಅಲ್ಲದೆ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಾಲುವೆಯ ಕೊನೇ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯುವಂತೆ ನಿಗಾವಹಿಸಬೇಕೆಂದು ನೀರಾವರಿ ಇಲಾಖೆ ಎಇಇ ವಿಜಯಲಕ್ಷ್ಮೀಗೆ ಸಚಿವರು ಸೂಚಿಸಿದರು.

ಮಾನ್ವಿ ಮತ್ತು ಸಿರವಾರ ತಾಲೂಕುಗಳ ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ಒಪ್ಪಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್‌ಸಾಬ್, ಪಂಚ ಗ್ಯಾರಂಟಿ ತಾಲೂಕು ಅಧ್ಯಕ್ಷ ಬಿ.ಕೆ.ಅಂಬರೀಷಪ್ಪ, ಸೈಯದ್ ಖಲೀದ್‌ಖಾದ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net