

ಕುಷ್ಟಗಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅನುಷ್ಠಾನಗೊಳಿಸಿರುವ ಜೆಜೆಎಂ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕವಾಗಿದ್ದು, ಕಾಮಗಾರಿಯ ತನಿಖೆ ಕೈಗೊಂಡು ಕರ್ತವ್ಯ ಲೋಪ ಎಸಗಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರವೇ ಕಾರ್ಯಕರ್ತರು ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇಗೆ ಬರೆದ ಪತ್ರವನ್ನು ಕಚೇರಿ ನೌಕರ ಮೆಹಬೂಬ್‌ಸಾಬ್‌ಗೆ ಮಂಗಳವಾರ ಸಲ್ಲಿಸಿದರು.
ಜೆಜೆಎಂ ಕಾಮಗಾರಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಯೋಜನೆಯಂತೆ 2019ರಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಈಗಲೂ ಆಮೆಗತಿಯಲ್ಲಿಯೇ ಸಾಗುತ್ತಿದೆ. ನಿಯಮಾನುಸಾರ ಪೈಪ್‌ಲೈನ್ ಅಳವಡಿಸಿಲ್ಲ.
ಇದನ್ನೂ ಓದಿ: ಶುದ್ಧ ಕುಡಿವ ನೀರು,ಸ್ವಚ್ಛತೆಗೆ ಆದ್ಯತೆ
ಅಲ್ಲಲ್ಲಿ ಪೈಪ್‌ಗಳು ಒಡೆದು ನೀರು ಪೋಲಾಗುತ್ತಿದ್ದರೂ ದುರಸ್ತಿ ಕಾರ್ಯ ನಡೆಯುತ್ತಿಲ್ಲ. ಪೈಪ್ ಅಳವಡಿಸಲು ಸಿಸಿ ರಸ್ತೆಗಳನ್ನು ಅಗೆದು ಕೈಬಿಡಲಾಗಿದೆ. ಬಹುತೇಕ ಕಡೆ ಅಳವಡಿಸಿರುವ ನಲ್ಲಿಗಳು ಕಿತ್ತು ಹೋಗಿವೆ. ಕೆಲವೆಡೆ ಹೊಸದಾಗಿ ಪೈಪ್‌ಲೈನ್ ಮಾಡದೆ ಈ ಹಿಂದಿದ್ದ ಹಳೆಯ ಪೈಪ್‌ಗಳನ್ನೇ ಯೋಜನೆಗೆ ಬಳಸಿಕೊಳ್ಳಲಾಗಿದೆ. ಮೇಲಧಿಕಾರಿಗಳು ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ಪ್ರಕಾಶ ಮನ್ನೇರಾಳ, ಉಪಾಧ್ಯಕ್ಷರಾದ ಚನ್ನಪ್ಪ ನಾಲಗಾರ, ಅಶೋಕ ಮಿಸ್ಕಿನ್, ಸಂಘಟನಾ ಕಾರ್ಯದರ್ಶಿ ಶರಣಪ್ಪ ನಿಡಗುಂದಿ, ಪರಸಪ್ಪ ಅಳ್ಳಳ್ಳಿ ಇತರರು ಇದ್ದರು.