ಹುರಳಿಕುಪ್ಪಿ ಗ್ರಾಮಕ್ಕೆ ಜೆಜೆಎಂ ಮಂಜೂರು

bommayi
Published on

ಸವಣೂರ: ಪ್ರತಿಯೊಬ್ಬರೂ ಆರೋಗ್ಯವಂತರಾಗಿದ್ದಲ್ಲಿ ಮಾತ್ರ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ, ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್, ಶ್ರೀ ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಡಾ.ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನರ ಆರೋಗ್ಯದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸ್ವಚ್ಛ ಭಾರತ ಅಭಿಯಾನ, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ, ಜನೌಷಧ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಆಯುಷ್ಮಾನ್‌ಕಾರ್ಡ್‌ನಿಂದ 5 ಲಕ್ಷ ರೂ.ವರೆಗೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೆ ಬಡವರಿಗಾಗಿ ಅಗ್ಗದ ದರದಲ್ಲಿ ಔಷಧ ಸಿಗುವ ನಿಟ್ಟಿನಲ್ಲಿ ರಾಜ್ಯದಲ್ಲಿ 1ಸಾವಿರಕ್ಕೂ ಹೆಚ್ಚು ಜನೌಷಧ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

ಹುರಳಿಕುಪ್ಪಿ ಗ್ರಾಮಕ್ಕೆ 7.5 ಕೋಟಿ ರೂ. ಅನುದಾನದಲ್ಲಿ ಜಲಜೀವನ ಮೀಷನ್ ಮಂಜೂರಾತಿಯಾಗಿ ಟೆಂಡರ್ ಆಗಿದೆ. ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವದು ಎಂದರು.

ಕ್ಷಮತಾ ಸೇವಾ ಸಂಸ್ಥೆಯ ಗೋವಿಂದ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ನಿರ್ಮಲಾ ಕಲಕೋಟಿ, ಬಿಜೆಪಿ ಸವಣೂರ ಮಂಡಲ ಅಧ್ಯಕ್ಷ ಗಂಗಾಧರ ಬಾಣದ, ಶಿಗ್ಗಾಂವ ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ರಾಜೀವಗಾಂಧಿ ಯೂನಿರ್ವಸಿಟಿ ಸಿಂಡಿಕೇಟ್ ಸದಸ್ಯೆ ಡಾ. ಶೋಭಾ ನಿಸ್ಸೀಮಗೌಡ್ರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಗಡೆಪ್ಪನವರ, ಡಾ.ಎಂ.ಎಂ.ತಿರ್ಲಾಪೂರ, ನಾಗಪ್ಪ ತಿಪ್ಪಕ್ಕನವರ, ಎಂ.ಕೆ.ಬಿಜ್ಜೂರ, ಪಾಂಡಪ್ಪ ತಿಪ್ಪಕ್ಕನವರ ಹಾಗೂ ಇತರರು ಪಾಲ್ಗೊಂಡಿದ್ದರು. ಎಸ್.ಎನ್. ಕಲಕೋಟಿ, ಎ.ಬಿ. ಯಲಿಗಾರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net