ಜೆಜೆಎಂ ಯೋಜನೆ ಕಾಮಗಾರಿ ಕಳಪೆ

6SND-02
ಸಿಂಧನೂರಿನ ತಾಪಂ ಸಭಾಂಗಣದಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು. ಶಾಸಕ ಹಂಪನಗೌಡ ಬಾದರ್ಲಿ, ಎಂಎಲ್ಸಿ ಬಸನಗೌಡ ಬಾದರ್ಲಿ, ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ತಾಪಂ ಇಒ ಚಂದ್ರಶೇಖರ ಇದ್ದರು.
Published on

ಸಿಂಧನೂರು: ತಾಲೂಕಿನಲ್ಲಿ ಜೆಜೆಎಂ ಶುದ್ಧ ಕುಡಿವ ನೀರಿನ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಎಲ್ಲಿಯೂ ನೀರು ಹರಿದಿಲ್ಲ. ಈ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ರಚಿಸಿ, ವರದಿ ನೀಡಲು ಕ್ರಮಕೈಗೊಳ್ಳಬೇಕೆಂದು ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆಗೆ ಶಾಸಕ ಹಂಪನಗೌಡ ಬಾದರ್ಲಿ ಸೂಚಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ತಿಳಿಸಿದರು. ಜೆಜೆಎಂ ಯೋಜನೆ ಅನುಷ್ಠಾನಕ್ಕೆ ಅಂದಾಜು 110 ಕೋಟಿ ರೂ.ವೆಚ್ಚ ಮಾಡಲಾಗಿದೆ. ಆದರೆ, ಯಾವ ಊರಿಗೆ, ಯಾರ ಮನೆಗೆ ನೀರು ಕೊಟ್ಟಿದ್ದೀರಿ ಲೆಕ್ಕ ಕೊಡಿ ಎಂದಾಗ, ಜಿಪಂ ಉಪವಿಭಾಗದ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಅಧಿಕಾರಿಗಳಾದ ವಿಜಯಲಕ್ಷ್ಮೀ, ಧನರಾಜ್ ತಡವರಿಸುತ್ತ ನೀರು ಕೊಡುತ್ತಿದ್ದೇವೆ ಎಂದರು.

ತಕ್ಷಣ ಪಿಡಿಒಗಳಿಂದ ಮಾಹಿತಿ ಪಡೆದ ಶಾಸಕರು, ನೀವು ಸುಳ್ಳು ಹೇಳಬೇಡಿ, ಯಾವ ಹಳ್ಳಿಯಲ್ಲೂ ಜೆಜೆಎಂ ನೀರು ಬಂದಿಲ್ಲ. ಸರ್ಕಾರದ ಉದ್ದೇಶ ಬುಡಮೇಲು ಮಾಡಿದ್ದೀರಿ, ಪ್ರತಿ ಮನೆಗೆ ಮೀಟರ್ ಅಳವಡಿಸಿಲ್ಲ. ಕೇವಲ ನಳಗಳನ್ನು ಅಳವಡಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಎಂಎಲ್ಸಿ ಬಸನಗೌಡ ಬಾದರ್ಲಿ ಮಧ್ಯಪ್ರವೇಶಿಸಿ, ನೀವು (ಅಧಿಕಾರಿಗಳು) ಜೆಜೆಎಂ ಕಾಮಗಾರಿ ಕಳಪೆಯಲ್ಲಿ ಮಾಡಿಸಿದ್ದೀರಿ, ಯಾವ ಊರಿಗೂ ನೀರು ತಲುಪುತ್ತಿಲ್ಲ. ಹೊಸಳ್ಳಿಕ್ಯಾಂಪ್‌ನಲ್ಲಿ ಯೋಜನೆ ಸಂಪೂರ್ಣ ಕಳಪೆಯಾಗಿದೆ. ತನಿಖೆ ಮಾಡಿ ವರದಿ ನೀಡಲು ಹೇಳಿದ್ದರೂ ಏನೂ ಮಾಡಿಲ್ಲ. ವಾಸ್ತವ ವರದಿ ನೀವು ಕೊಡಬೇಕು. ಕೂಡಲೇ ಯೋಜನೆ ಬಗ್ಗೆ ತನಿಖೆ ನಡೆಸಬೇಕೆಂದರು.

ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಪ್ರತಿಕ್ರಿಯಿಸಿ, ಶಾಸಕರು ಹೇಳಿದಂತೆ ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ರಚಿಸಿ, ತನಿಖೆ ನಡೆಸಿ ವರದಿ ನೀಡಲಾಗುವುದೆಂದು ಭರವಸೆ ನೀಡಿದರು. ಬಸನಗೌಡ ಬಾದರ್ಲಿ ಮಾತನಾಡಿ, ತಾಲೂಕಿನಲ್ಲಿ ಆರ್‌ಒ ಪ್ಲಾಂಟ್‌ಗಳು ಕೆಟ್ಟು ಹೋಗಿವೆ. ನೀರಿನ ಸಮಸ್ಯೆ ಇದ್ದರೂ, ಎಲ್ಲ ಗ್ರಾಪಂ ಪಿಡಿಒಗಳು ಸಭೆಗೆ ತಪ್ಪು ಮಾಹಿತಿ ನೀಡಿ ಜಾರಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಶಶಿಕಾಂತ ಶಿವಪುರೆ ಉತ್ತರಿಸಿ, ತಾಲೂಕು ಮಟ್ಟದ ಅಧಿಕಾರಿಗಳನ್ನು ಕಳಿಸಿ ವರದಿ ಪಡೆಯಲಾಗುವುದು. ಕುಡಿವ ನೀರು, ಚರಂಡಿ ಇದ್ದ ಕಡೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದರು.

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ, ಮೀನುಗಾರಿಕೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಾಪಂ ಇಒ ಚಂದ್ರಶೇಖರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net