

ಬೈಲುಕುಪ್ಪೆ: ಜಲಜೀವನ್ ಮಿಷನ್ ಸಂಬಂಧಿಸಿದಂತೆ ಶುದ್ಧ ಕುಡಿಯುವ ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಜೆಜೆಎಂ ಯೋಜನೆಯ ಮೇಲ್ವಿಚಾರಕ ನಾಗೇಶ್ ಸೂಚನೆ ನೀಡಿದರು.
ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಲಜೀವನ್ ಮಿಷನ್ ಯೋಜನೆಯ ಸಭೆಯಲ್ಲಿ ಮಾತನಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ದೊಡ್ಡ ಹೊಸೂರು, ರಾಣಿಗೇಟು, ಚಿಕ್ಕಹೊಸೂರು, ಗುಡ್ಡೆನಹಳ್ಳಿ ಸೇರಿದಂತೆ 8 ಹಳ್ಳಿಗಳಿದ್ದು ಈಗಾಗಲೇ ಪೈಪ್‌ಲೈನ್ ಕಾಮಗಾರಿ ಕೊಪ್ಪ ಮತ್ತು ಗೆರೋಸಿಯ ಕಾಲನಿ ಹೊರತುಪಡಿಸಿ ಕಾಮಗಾರಿ ಪೂರ್ಣಗೊಂಡಿದೆ. ಸದ್ಯದಲ್ಲೇ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯನ್ನು ಎರಡು ಹಳ್ಳಿಗಳಲ್ಲಿಯೂ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಸದಸ್ಯ ಶಬೀರ್ ಸಾಬ್ ಮಾತನಾಡಿ, ಅಧಿಕಾರಿಗಳ ನಿರ್ಲಕ್ಷೃದಿಂದ ಗುತ್ತಿಗೆದಾರ ಗುಣಮಟ್ಟದ ಕಾಮಗಾರಿ ಮಾಡಿಲ್ಲ. ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿದರು. ಇಂಜಿನಿಯರ್ ಜಿತೇಂದ್ರ ಪ್ರತಿಕ್ರಿಯಿಸಿ, ಎಲ್ಲ ಸರಿಯಾಗಿದೆ ಎಂದು ತಿಳಿಸುತ್ತಿದ್ದಂತೆ ಸದಸ್ಯರಾದ ಸಾವಿತ್ರಮ್ಮ, ಸೈಯದ್ ಸಲೀಂ, ಇತರ ಸದಸ್ಯರು ಆಕ್ಷೇಪಿಸಿದರು. ನೀವು ಗ್ರಾಮಕ್ಕೆ ಬಂದು ಗುತ್ತಿಗೆದಾರ ಮಾಡಿರುವ ಕಾಮಗಾರಿ ಮಾಡಿರುವುದನ್ನು ನೋಡಿ ಎಂದು ಹೇಳಿದರೂ ಗ್ರಾಮಕ್ಕೆ ಬರಲಿಲ್ಲ ಎಂದು ತರಾಟೆ ತೆಗೆದುಕೊಂಡರು. ಪಿಡಿಒ ಸತೀಶ್ ಸಮಾಧಾನಪಡಿಸಿದರು.
ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಅಕ್ಕಯ್ಯಮ್ಮ. ಕೆ ಕೆ ನಾರಾಯಣ್, ಜಾಫರ್ ಸಾದಿಕ್, ಹರಿಣಿ, ಸುಮಾ, ಶೋಭಾ, ಪೂರ್ಣಿಮಾ, ಕಾರ್ಯದರ್ಶಿ ಮಹದೇವ್, ಇಂಜಿನಿಯರ್‌ಗಳಾದ ರಫೀಕ್, ಲಕ್ಷ್ಮೀ ಇತರರು ಇದ್ದರು.