

ಯಲಬುರ್ಗಾ: ಜೆಜೆಎಂ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರೊದಗಿಸುವುದೇ ಯೋಜನೆ ಉದ್ದೇಶ ಎಂದು ಗ್ರಾಪಂ ಅಧ್ಯಕ್ಷೆ ಅಂದಮ್ಮ ಬಳೆಗಾರ ಹೇಳಿದರು.
ತಾಲೂಕಿನ ಬೇವೂರು ಗ್ರಾಪಂನಲ್ಲಿ ಜಿಪಂ, ಆರ್‌ಡಬ್ಲುೃಎಸ್ ಇಲಾಖೆ, ಜೆಜೆಎಂ ಯೋಜನೆ, ಲೆಸನ್ ಫೌಂಡೇಶನ್ ಹಾಗೂ ಗ್ರಾಪಂ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೆಜೆಎಂ ಯೋಜನೆಯ ಐಇಸಿ ಮತ್ತು ಎಚ್‌ಆರ್‌ಡಿ ಚಟುವಟಿಕೆಯ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಗ್ರಾಮಸ್ಥರು ನಳಗಳ ಸಂರಕ್ಷಣೆ ಮಾಡುವುದರ ಜತೆಗೆ ನೀರನ್ನು ಮಿತವಾಗಿ ಬಳಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಹುಗ್ರಾಮ ಕುಡಿವ ನೀರಿನ ಯೋಜನೆಯ ಸದುಪಯೋಗವಾಗಬೇಕು ಎಂದರು.
ಪಿಡಿಒ ಅಬ್ದುಲ್ ಗಫರ್ ಮಾತನಾಡಿ, ಜೆಜೆಎಂ ವಸ್ತುಪ್ರದರ್ಶನ ಮಹತ್ವದ ಕಾರ್ಯಕ್ರಮ. ಸಾರ್ವಜನಿಕರು ವೀಕ್ಷಣೆ ಮಾಡುವುದರ ಜತೆಗೆ ಶುದ್ಧ ಕುಡಿಯುವ ನೀರಿನ ಕುರಿತು ತಿಳಿವಳಿಕೆ ಪಡೆದುಕೊಂಡು ನೀರು ಮಿತವಾಗಿ ಬಳಸಬೇಕು. ಅಂತರ್ಜಲಮಟ್ಟ ಹೆಚ್ಚಳಕ್ಕೆ ಇಂಗುಗುಂಡಿ, ಕೊಳವೆಬಾವಿ ಮರುಪೂರಣ, ಮಳೆ ನೀರು ಕೊಯ್ಲು ನಿರ್ಮಾಣದಿಂದ ನೀರಿನ ಸಂರಕ್ಷಣೆ ಸಾಧ್ಯ ಎಂದು ಹೇಳಿದರು.
ಗ್ರಾಪಂ ಸದಸ್ಯರಾದ ಅನ್ನಪೂರ್ಣಮ್ಮ ಯಮನಪ್ಪ ಗಡ್ಡದ, ಬಸವಣ್ಣೆಮ್ಮ ಭಾವಿಕಟ್ಟಿ, ಶಿಕ್ಷಕರಾದ ರುದ್ರಪ್ಪ ವದ್ನಾಳ, ನಾಗರಾಜ ಮ್ಯಾದನೇರಿ, ಕೆಎಚ್‌ಪಿಟಿ ಸಮಾಲೋಚಕ ಶರಣಪ್ಪ, ಕಾರ್ಯದರ್ಶಿ ಶರಣಪ್ಪ ಬಡಿಗೇರ್, ಕರವಸೂಲಿಗಾರ ಬಸವರಾಜ, ಸಿಬ್ಬಂದಿ ಮಲ್ಲಪ್ಪ, ಐಎಸ್‌ಆರ್‌ಟಿ ಟೀಮ್‌ನ ರವಿ ಕೋಳೂರು, ಬಸವರಾಜ ಮುಂಡರಗಿ, ಕನಕಪ್ಪ ಅಕ್ಕಿ ಇತರರಿದ್ದರು.